ಬೆಂಗಳೂರು: ವಿಮಾನ ನಿಲ್ದಾಣದಿಂದಲೇ ಅರುಣ್ ಸಿಂಗ್ ಮಾತು ಆರಂಭಿಸಿದ್ದರು. ಒಬ್ಬ ಪ್ರಧಾನಿಗೆ ಸಿಗುವಷ್ಟು ಪ್ರಚಾರ ಅವರಿಗೆ ಸಿಕ್ಕಿತ್ತು. ಸಿಂಗ್ ಏರ್ಪೋರ್ಟ್ನಿಂದ ಬಂದಿದ್ದೇನು, ಕುಮಾರಕೃಪಾ ಗೆಸ್ಟ್ಹೌಸ್ನಲ್ಲಿ ಕೈಬೀಸಿದ್ದೇನು ಎಂದು ಬಿಜೆಪಿ ಕೇಂದ್ರ ಸಮಿತಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕ ಭೇಟಿಯ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಅರುಣ್ ಸಿಂಗ್ ಬರುವಾಗಲೇ ಏನು ಹೇಳುತ್ತಾರೆ ಎನ್ನುವುದು ನನಗೆ ಗೊತಿತ್ತು. ಹೀಗಾಗಿಯೇ ನಾನು ಅರುಣ್ ಸಿಂಗ್ ಭೇಟಿ ಮಾಡಲಿಲ್ಲ. ವಿಜಯೇಂದ್ರ ಎಲ್ಲರನ್ನೂ ಮ್ಯಾನೇಜ್ ಮಾಡ್ತಾರೆ. ದುಷ್ಟರ ಸಂಹಾರ ಆಗಿಯೇ ಆಗುತ್ತೆ. ಆದರೆ ಅದಕ್ಕೂ ಕಾಲ ಕೂಡಿ ಬರಬೇಕು ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಹಾಯ್ದರು.
ಏನೇನೋ ಅದು ಇದೂ ಮಾಡ್ತಾರೆ ಅದರ ಪರಿಣಾಮ ಮುಂದೆ ಅನುಭವಿಸುತ್ತಾರೆ. ಹಾಲಿ ಸಿಎಂ ಜೈಲಿಗೆ ಹೋದ ಉದಾಹರಣೆ ಇದೆ. ಮುಂದೆಯೂ ಹೀಗೆ ಆಗಬಾರದು ಎನ್ನುವುದು ನಮ್ಮ ಆಶಯ ಎಂದು ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಸಹ ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ವಿಶ್ವಾಸ ಇದೆ. ಆ ವಿಶ್ವಾಸ ಫಲ ಕೊಡುತ್ತದೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಮಾರ್ಮಿಕವಾಗಿ ನುಡಿದರು. ಎಂಟು ಹತ್ತು ಸಾವಿರ ಕೋಟಿ ರೂ. ಇದೆ ಅಂತ ಮಠಗಳನ್ನು ಖರೀದಿ ಮಾಡಿದರೆ ಹೆಚ್ಚು ದಿನ ನಡೆಯುವುದಿಲ್ಲ ಎಂದು ಹೇಳಿದರು.
ಮುರುಗೇಶ್ ನಿರಾಣಿ ಅವರ ಹೆಸರು ಪ್ರಸ್ತಾಪಿಸದೇ ಆಕ್ರೋಶ ಹೊರಹಾಕಿದ ಯತ್ನಾಳ್, ಪಂಚಮಸಾಲಿ ಮೀಸಲಾತಿ ಹೋರಾಟ ನಿಂತಿಲ್ಲ. ಆ ಹೋರಾಟದಲ್ಲಿ ಒಬ್ಬ ರಾಜಕಾರಣಿ ನಗ್ನನಾಗಿದ್ದಾನೆ ಎಂದು ಏಕವಚನದಲ್ಲಿ ಕಿಡಿಕಾರಿದರು.
ಕೆಲವರು ಯಡಿಯೂರಪ್ಪ ನಮ್ಮ ನಾಯಕ ಎಂದು ಹೊರಗೆ ಹೇಳುತ್ತಾರೆ. ಆದರೆ ಒಳಗೆ ಹೋಗಿ ಯಾವಾಗ ಬೇಕಾದರೂ ಮುಖ್ಯಮಂತ್ರಿಯನ್ನು ಬದಲಿಸಿ ಎನ್ನುತ್ತಾರೆ. ಆದಷ್ಟೂ ಬೇಗ ಮುಖ್ಯಮಂತ್ರಿಯನ್ನು ಬದಲಿಸಿ ಎಂದು ಒಳಗೊಳಗೆ ಮಾತನಾಡುವವರು ಹೊರಗೆ ಬಂದು ಜಯಕಾರ ಹಾಕುತ್ತಾರೆ. ನಾನು ಅಂಥವನಲ್ಲ ಎಂದರು.
ಯತ್ನಾಳ್ ಆರೋಪಕ್ಕೆ ನಿರಾಣಿ ಕಿಡಿ
ಕೇವಲ ಪಂಚಮಸಾಲಿ ಸಮುದಾಯ ಪರ ನಾನು ಹೋರಾಡುತ್ತಿಲ್ಲ, ಇಡೀ ವೀರಶೈವ ಲಿಂಗಾಯತ ಪರ ಹೋರಾಟ ಮಾಡುತ್ತಿದ್ದೇವೆ ಎಂದು ತಮ್ಮ ವಿರುದ್ಧ ಯತ್ನಾಳ್ ಮಾಡಿರುವ ಆರೋಪಕ್ಕೆ ಸಚಿವ ಮುರುಗೇಶ್ ನಿರಾಣಿ ತಿರುಗೇಟು ನೀಡಿದರು.
ಇನ್ನು ಹಾದಿಬೀದಿಯಲ್ಲಿ ನಿಂತು ಮಾತಾಡೋವರಿಗೆ ನಾನು ಉತ್ತರಕೊಡಲ್ಲ. ವೀರಶೈವ ಸಮುದಾಯ ಪ್ರಬುದ್ಧವಾಗಿದೆ. ಯಾರು ದುರ್ಬಲರು ಅನ್ನೋದನ್ನು ತೀರ್ಮಾನ ಮಾಡುತ್ತೆ ಎಂದು ಹೇಳಿದರು.