ಮೈಸೂರು: ಪೂಜೆ, ದೇವರ ಹೆಸರಿನಲ್ಲಿ ಮಹಿಳೆಯರನ್ನು ಮಹಿಳೆಯೊಬ್ಬಳು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿ ಪರಾರಿಯಾಗಿರುವ ಪ್ರಕರಣ ಮೈಸೂರು ನಗರದಲ್ಲಿ ನಡೆದಿದೆ.
ಸಾತಗಳ್ಳಿಯ ನಿವಾಸಿ ಹೇಮಲತಾ ವಂಚಿಸಿದ ಆರೋಪಿ. ಈಕೆ 15ಕ್ಕೂ ಹೆಚ್ಚು ಮಹಿಳೆಯರಿಗೆ ಅಂದಾಜು 70 ಲಕ್ಷ ರೂಪಾಯಿ ವಂಚನೆ ಎಸಗಿರುವ ಬಗ್ಗೆ ದೂರು ದಾಖಲಾಗಿದೆ.
ಆರೋಪಿ ಹೇಮಲತಾ 5 ವರ್ಷಗಳ ಹಿಂದೆ ಸಾತಗಳ್ಳಿ ಬಳಿ ಮನೆ ಬಾಡಿಗೆಗೆ ಪಡೆದಿದ್ದರು. ಸಾಯಿಬಾಬಾ ದೇಗುಲ ಬಳಿ ವಾಸವಿದ್ದ ವಂಚಕಿ ಹೋಮ, ಪೂಜೆ ಮಾಡುತ್ತಾ ಸ್ಥಳೀಯರ ವಿಶ್ವಾಸಗಳಿಸಿದ್ದಳು. ದೇವರ ಹೆಸರಲ್ಲಿ ಬಾಗಿನ, ಅರಿಶಿನ ಕುಂಕುಮ, ಗಿಫ್ಟ್ ಕೊಡುತ್ತಿದ್ದಳಂತೆ.
ಇನ್ನು ಈಕೆಯೊಂದಿಗೆ ವಿಶ್ವಾಸದಿಂದಿದ್ದ ಮಹಿಳೆಯರ ಒಡವೆಗಳನ್ನು ಅವರ ಹೆಸರಿನಲ್ಲೇ ಗಿರವಿ ಇಡಿಸಿ ಹಣ ಪಡೆದಿದ್ದಳಂತೆ. ಕೆಲವರಿಗೆ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಕೊಡಿಸಿ ಹಣ ಗುಳುಂ ಮಾಡಿದ್ದಾಳೆ. ಎಲ್ಲವನ್ನೂ ದೋಚಿದ ಮೇಲೆ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ವಂಚಕಿ ಹೇಮಲತಾ ಪರಾರಿಯಾಗಿದ್ದಾಳೆ. ವಂಚಕಿ ಹೇಮಲತಾ ವಿರುದ್ಧ ಸದ್ಯ ಉದಯಗಿರಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.