ಬೆಂಗಳೂರು: ಇನ್ನು ಮುಂದೆ ವೀಕೆಂಡ್ ಕರ್ಫ್ಯೂ ಇರಲ್ಲ. ಸಭೆ ಸಮಾರಂಭಕ್ಕೆ ಅವಕಾಶ ಇಲ್ಲ. ಜುಲೈ 5ರಿಂದ 19ರವರೆಗೆ ಕೊರೊನಾ ಅನ್ ಲಾಕ್ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕೋವಿಡ್-19 ನಿಯಂತ್ರಣ ತಾಂತ್ರಿಕ ಸಲಹೆಗಳನ್ನು ಗಮನಿಸಿ ಸಚಿವ ಸಂಪುಟದ ಸಹೊದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ, ಖಾಸಗಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳು, ಮಾಲ್ಗಳಿಗೆ ಅನುಮತಿ, ಮೆಟ್ರೋ, ಕಾರ್ಮಿಕ ಕಾರ್ಯಗಳಿಗೆ ಅವಕಾಶ ನೀಡಲಾಗಿದೆ ಎಂದರು.
- ಯಾವುದಕ್ಕೆಲ್ಲ ವಿನಾಯ್ತಿ..?
ಸರ್ಕಾರಿ/ಖಾಸಗಿ ಕಚೇರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. 100 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. - ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
- ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಶೇ.100 ರಷ್ಟು ಪ್ರಮಾಣಿಕರೊಂದಿಗೆ ಸಂಚರಿಸಲು ಅವಕಾಶ.
- ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ.
- ಅಂತ್ಯ ಸಂಸ್ಕಾರಕ್ಕೆ 20 ಸದಸ್ಯರು ಭಾಗವಹಿಸಲು ಅವಕಾಶ.
- ಕೊರೊನಾ ಕರ್ಫ್ಯೂ (ನೈರ್ಟ್ ಕರ್ಫ್ಯೂ) ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
- ಪಬ್ ಗಳು ಕಾರ್ಯನಿರ್ವಹಿಸಲು ಅವಕಾಶವಿಲ್ಲ. ಬಾರ್ ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
- ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.
- ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ ಭಾಗವಹಿಸಲು ಅವಕಾಶ.
- ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ.
- ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದಿಲ್ಲ.
- ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಹಾಗೂ ಇತರ ಸಮಾರಂಭಗಳಿಗೆ ಅವಕಾಶವಿಲ್ಲ.
- ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಪ್ರತ್ಯೇಕವಾಗಿ ತೀರ್ಮಾನಿಸಲಾಗುವುದು.
- ಚಿತ್ರಮಂದಿರಗಳ ಕಾರ್ಯನಿರ್ವಹಣೆಗೆ ಅವಕಾಶವಿಲ್ಲ.
- ಜಿಲ್ಲೆಯಲ್ಲಿರುವ ಪರಿಸ್ಥಿತಿಗನುಗುಣವಾಗಿ ಆಯಾಯ ಜಿಲ್ಲೆಯ ಜಿಲ್ಲಾಡಳಿತಗಳು ಇನ್ನೂ ಹೆಚ್ಚಿನ ನಿರ್ಬಂಧಗಳು ಅವಶ್ಯವಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಿದೆ.
ಕೋವಿಡ್-19 ನಿಯಂತ್ರಿಸುವ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆ ಕಡೆಗೆ ಗಮನ ಹರಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಸಿಎಂ ವಿನಂತಿಸಿದರು.