ವಿಜಯಪುರ: ಕೊರೊನಾದಿಂದಾಗಿ ರಾಜ್ಯದ ನಾಲಕ್ಕೂ ರಸ್ತೆ ಸಾರಿಗೆ ಸಂಸ್ಥೆಗಳು ಸಾಕಷ್ಟು ನಷ್ಟದಲ್ಲಿವೆ. ಹೀಗಾಗಿ ಸಿಬ್ಬಂದಿಗೆ ಸಂಬಳ ಕೊಡುವುದೂ ಕಷ್ಟವಾಗಿತ್ತು. ಇದನ್ನು ಮನಗಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 162.5 ಕೋಟಿ ರೂ. ನೀಡಿದ್ದು, ನಾಳೆಯಿಂದಲೇ ಎರಡು ಹಂತದಲ್ಲಿ ಸಿಬ್ಬಂದಿಗೆ ಸಂಬಳ ನೀಡಲಾಗುವುದು ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀವ್ರ ಸಂಕಷ್ಟದಲ್ಲಿದ್ದರೂ, ಸಂಸ್ಥೆಯ ಸಿಬ್ಬಂದಿಗೆ ಸಂಬಳ ನೀಡಿದ್ದೇವೆ. ಹೀಗಾಗಿ ಕೋಡಿಹಳ್ಳಿ ಚಂದ್ರಶೇಖರ ಹೋರಾಟ ಮಾಡಿದರೆ ನಮ್ಮ ಸಿಬ್ಬಂದಿ ಬೆಂಬಲಿಸುವುದಿಲ್ಲ ಎಂದು ಹೇಳಿದರು.
ಇನ್ನು ಮುಂದೆ ನಮ್ಮ ಸಾರಿಗೆ ನೌಕರರು ಹೋರಾಟಕ್ಕಿಳಿಯಲ್ಲ. ಕೋಡಿಹಳ್ಳಿ ಚಂದ್ರಶೇಖರ್‌ಗೆ ಹೋರಾಟ ಮಾಡುವುದು ಮಾತ್ರ ಗೊತ್ತು. ಆದರೆ ಈ ಬಾರಿ ನಮ್ಮ ನೌಕರರು ಅವರ ಹೋರಾಟಕ್ಕೆ ಕೈ ಜೋಡಿಸುವುದಿಲ್ಲ ಎಂದು ತಿಳಿಸಿದರು.
ಸಿಎಂ ಕುರ್ಚಿ ಖಾಲಿಯಿಲ್ಲ: ಪ್ರಸ್ತುತ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ. ಇನ್ನು ಸದ್ಯ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿಯಿಲ್ಲ. ನಾನು ಸಿಎಂ ಸ್ಥಾನದ ರೇಸ್‌ನಲ್ಲಿಲ್ಲ. ಮುಂದಿನ ಚುನಾವಣೆ ಬಳಿಕ ಯಾರು ಸಿಎಂ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸವದಿ ಹೇಳಿದರು.
ಅಧಿಕಾರ ಬೇಡಿ ಪಡೆಯುವ ಜಾಯಮಾನ ನನ್ನದಲ್ಲ. ಮೇಲಾಗಿ ನಾನು ಯಾವುದನ್ನೂ ಅಪೇಕ್ಷಿಸಲ್ಲ ಎಂದು ಸಾರಿಗೆ ಸವದಿ ಈ ವೇಳೆ ಸ್ಪಷ್ಟಪಡಿಸಿದರು.