ಮೈಸೂರು: ಮಂಡ್ಯ ಜಿಲ್ಲೆಯ ಕೆಆರ್ಎಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧದ ಸಂಸದೆ ಸುಮಲತಾ ಅವರ ಹೋರಾಟಕ್ಕೆ ರೈತ ಸಂಘ ಸದಾ ಬೆಂಬಲ ನೀಡಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಮೈಸೂರಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಾಶಯದ ಸುತ್ತಮುತ್ತಲಿನ 20 ಕಿ. ಮೀ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಅಥವಾ ಸಕ್ರಮ ಯಾವುದೇ ಗಣಿಗಾರಿಕೆಯಾಗಲೀ, ಅದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು, ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತರ ಜೀವನಾಡಿ ಕೆಆರ್ಎಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಜಲಾಶಯದ ಅಸ್ತಿತ್ವಕ್ಕೆ ಅಪಾಯವಿದೆ. ಇದರ ಮೇಲೆ ಅವಲಂಬಿತರಾಗಿರುವ ಸಾವಿರಾರು ಜನರ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನು ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ರಾಜ್ಯದ ವಿವಿಧೆಡೆ ಇದರ ಬೇರು ಹಬ್ಬಿದೆ. ಹೀಗಾಗಿ ಅದನ್ನು ಬೇರು ಸಮೇತ ಕಿತ್ತುಹಾಕಲು ಸರ್ಕಾರವೂ ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.