ಚಾಮರಾಜನಗರ: ಹೈಕಮಾಂಡ್ ನಡುವೆ ಮಾಡಿಕೊಂಡಿದ್ದ ಒಪ್ಪಂದದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗ ನಡೆದುಕೊಳ್ಳುತ್ತಿದ್ದಾರೆ ಎಂದು ರಾಜೀನಾಮೆ ವಿಚಾರವಾಗಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಹೈಕಮಾಂಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಈಗ ನಡೆದುಕೊಳ್ಳುತ್ತಿದ್ದಾರೆ.
75 ವರ್ಷ ಆದವರು ಮುಖ್ಯ ಹುದ್ದೆಗಳಲ್ಲಿ ಇರಬಾರದು ಎಂಬುದು ಪಕ್ಷದ ನಿಲುವು. ಹಾಗಿದ್ದರೂ ಸಮ್ಮಿಶ್ರ ಸರ್ಕಾರ ಪತನವಾದಾಗ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ವಯಸ್ಸಾಗಿದ್ದರೂ, ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಲು ಅವಕಾಶ ಕೊಡುವುದಾಗಿ ಹೈಕಮಾಂಡ್ ಹೇಳಿತ್ತು.
ಅಂದಿನ ಮಾತುಕತೆಯಂತೆ ಯಡಿಯೂರಪ್ಪ ಈಗ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದುವರೆಗೆ ಇದ್ದ ಊಹಾಪೋಹಕ್ಕೆ ಈ ಮೂಲಕ ತೆರೆ ಬಿದ್ದಿದೆ ಎಂದು ತಿಳಿಸಿದರು.
ಮಠಾಧೀಶರ ಬೆಂಬಲ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ಸೂಪರ್ ಹೈಕಮಾಂಡ್‌ಗಳಲ್ಲ. ಸ್ವಾಮೀಜಿಗಳು, ಹಿತೈಷಿಗಳು, ಬೆಂಬಲಿಗರು ಪಕ್ಷಕ್ಕೆ ಧಕ್ಕೆ ತರುವಂತೆ ಯಾರೂ ನಡೆದುಕೊಳ್ಳಬಾರದು, ಹೇಳಿಕೆ ನೀಡಬಾರದು ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸಿದ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದೆ’ ಎಂದರು.
ಬಿಜೆಪಿ ದಲಿತರನ್ನು ಸಿಎಂ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿ, ಅವನ್ಯಾರು ಹೇಳುವುದಕ್ಕೆ ಎಂದು ಏಕವಚನದಲ್ಲಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ‘ಮುಂದಿನ ಬಾರಿಗೆ ದಲಿತ ಮುಖ್ಯಮಂತ್ರಿಯನ್ನು ಮಾಡುತ್ತೇನೆ’ ಎಂದು ಹೇಳುತ್ತಿದ್ದರು. ಅದಾದ ಮೇಲೆ ಮಾತನ್ನು ಬದಲಾಯಿಸಿದರು. ‘ನಾನೇ ಮುಂದಿನ ಮುಖ್ಯಮಂತ್ರಿ’ ಎಂದು ಅಂಬಾರಿ ಮೇಲೆ ಕುಳಿತುಕೊಂಡು ಬಂದರು ಎಂದು ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಸೋತ ನಂತರ ಚುನಾವಣೆಗೆ ನಿಲ್ಲಲು ಕ್ಷೇತ್ರ ಹುಡುಕುವ ಪರಿಸ್ಥಿತಿಗೆ ಬಂದಿದ್ದಾರೆ. ಸುಮ್ಮನೆ ಮಾತನಾಡುತ್ತಾರೆ’ ಎಂದು ಕಿಡಿಕಾರಿದರು.