ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ 32 ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಮತ್ತೊಂದು ಪದಕದ ಆಸೆ ಭಗ್ನವಾಗಿದ್ದು, ಭಾರತದ ದ್ಯುತಿ ಚಾಂದ್ ಸೆಮಿ ಫೈನಲ್ ಗೇರುವಲ್ಲಿ ವಿಫಲರಾಗಿದ್ದಾರೆ.
ಇಂದು (ಸೋಮವಾರ) ಬೆಳಗ್ಗೆ ನಡೆದ ರೇಸ್‌ನಲ್ಲಿ ಕೊನೆ ಸ್ಥಾನವನ್ನು ಪಡೆದು ಅವರು ಕ್ರೀಡಾಕೂಟದಿಂದ ನಿರ್ಗಮಿಸಿ ನಿರಾಶೆ ಮೂಡಿಸಿದರು.
100ಮೀ. ಓಟ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ವಿಫಲರಾಗಿದ್ದದ ಅವರು 23.85ಸೆಕೆಂಡ್‌ಗಳಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಓಡಿಶಾದ ೨೫ ವರ್ಷದ ದ್ಯುತಿ ತಮ್ಮ ಕ್ರೀಡಾ ಋತುವಿನಲ್ಲಿ ವೈಯಕ್ತಿಕವಾಗಿ 23 ಸೆಕೆಂಡ್‌ಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿದರಾದರೂ 200 ಮೀ. ಸೆಮಿಫೈನಲ್ಸ್ ಅರ್ಹತಾ ಸುತ್ತಿನಲ್ಲಿ ನಿರೀಕ್ಷಿತ ಫಲಿತಾಂಶ ಲಭಿಸಲಿಲ್ಲ.
ಅಥ್ಲೆಟಿಕ್ ಮಹಿಳೆಯರ 200 ಮೀ ರಿಲೇಯ ಮೊದಲ ಸುತ್ತಿನಲ್ಲೇ ಭಾರತದ ದ್ಯುತಿ ಚಾಂದ್ 7ನೇ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಸ್ಪರ್ಧೆಯಿಂದ ಔಟ್ ಆಗಿದ್ದಾರೆ.
2018ರ ಏಷ್ಯನ್ ಕ್ರೀಡಾಕೂಟದಲ್ಲಿ ರಜತ ಪದಕ ಗೆದ್ದು ಒಲಿಂಪಿಕ್ಸ್‌ನಲ್ಲಿ ಭಾರೀ ಭರವಸೆ ಮೂಡಿಸಿದ್ದ ಈ ಓಟಗಾತಿಯ ವಿಫಲತೆ ಕ್ರೀಡಾಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.
ಇನ್ನು ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಈವರೆಗೂ 2 ಪದಕಗಳನ್ನು ಗೆದ್ದಿದ್ದು, ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು (49 ಕೆಜಿ ವಿಭಾಗ) ಭಾರತಕ್ಕೆ ಬೆಳ್ಳಿ ಪದಕ ತಂದಿದ್ದು, ನಿನ್ನೆ ಬ್ಯಾಡ್ಮಿಂಟನ್ ನಲ್ಲಿ ಪಿ.ವಿ. ಸಿಂಧು ಕಂಚಿನ ಪದಕ ಗೆದ್ದಿದ್ದಾರೆ.
ಅಂತೆಯೇ ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಲವ್ಲಿನಾ ಬರ್ಗಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಖಾತ್ರಿ ಪಡಿಸಿದ್ದಾರೆ.