ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಮಗ ಮೃತಪಟ್ಟ ವಿಚಾರ ಕೇಳಿ, ಆಘಾತಗೊಂಡು ಆಸ್ಪತ್ರೆಯಿಂದ ಹೊರ ಬಂದ ತಾಯಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲೀಲಾವತಿ (45) ಅಪಘಾತದಲ್ಲಿ ಮೃತಪಟ್ಟ ಮಹಿಳೆ. ಮೋಹನ್ ಗೌಡ (20) ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಅಸುನೀಗಿದ ಯುವಕ.
ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಮೋಹನ್, ಬೈಕ್ ವಿಚಾರಕ್ಕೆ ತನ್ನ ಸ್ನೇಹಿತರೊಂದಿಗೆ ಜಗಳ ಮಾಡಿಕೊಂಡಿದ್ದ. ಬಳಿಕ ಮನೆಗೆ ಬಂದು ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದರು.
ಮೋಹನ್ ಸ್ನೇಹಿತರು ಮನೆಯ ಹೊರಗೆ ಬಂದು ಗಲಾಟೆ ಮಾಡುತ್ತಿರುವುದನ್ನು ಅವರ ತಂದೆ ಪೊಲೀಸರಿಗೆ ತಿಳಿಸಿದ್ದರು. ಮೋಹನ್ ಕೋಣೆಯ ಬಾಗಿಲು ತೆರೆಯಲಿಲ್ಲ. ಅನುಮಾನಗೊಂಡ ಪೋಷಕರು ಪೊಲೀಸರ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ, ಮೋಹನ್ ನೇಣು ಬಿಗಿದುಕೊಂಡಿದ್ದ.
ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಮೋಹನ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು ಎಂದು ಪೊಲೀಸರು ತಿಳಿಸಿದರು. ಮಗ ಮೃತಪಟ್ಟ ವಿಚಾರದಿಂದ ಆಘಾತಗೊಂಡಿದ್ದ ತಾಯಿ ಲೀಲಾವತಿ ಆಸ್ಪತ್ರೆಯಿಂದ ಹೊರಬಂದಿದ್ದರು. ರಸ್ತೆಗೆ ಬಂದ ಕೂಡಲೇ ವಾಹನಕ್ಕೆ ಡಿಕ್ಕಿ ಹೊಡೆದು ಅವರೂ ಮೃತಪಟ್ಟಿದ್ದಾರೆ.
ಮೃತ ಮೋಹನ್ ಗೌಡ, ಅವರ ತಾಯಿ ಲೀಲಾವತಿ ಮತ್ತು ತಂದೆ ಎಂಸಿ ಲೇಔಟ್ ನಲ್ಲಿ ವಾಸಿಸುತ್ತಿದ್ದರು, ಮೋಹನ್ ಗೌಡ ಅವರ ತಂದೆ ರೇಷನ್ ಅಂಗಡಿ ನಡೆಸುತ್ತಿದ್ದರು.
ಮಧ್ಯಾಹ್ನ 12.30ರ ವೇಳೆಗೆ ರೂಮಿಗೆ ತೆರಳಿದ ಮೋಹನ್ ಗೌಡ ಆತ್ಮಹತ್ಯೆಗೆ ಯತ್ನಿಸಿದ್ದ. ಅವನನ್ನು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಮಗ ಸಾವನ್ನಪ್ಪಿದ್ದಾನೆ ಎಂದು ತಿಳಿದ ಕೂಡಲೇ ಆಕೆ ರಸ್ತೆಯಲ್ಲಿ ಓಡಿ ಹೋದರು. ಕೂಡಲೇ ಅವರ ಸಂಬಂಧಿಕರು ಆಕೆಯನ್ನು ಸಮಾಧಾನ ಪಡಿಸಲು ಹಿಂದೆಯೇ ಓಡಿದರು
ಈವೇಳೆ ವೇಗವಾಗಿ ಬರುತ್ತಿದ್ದ ಕಾರಿಗೆ ಸಿಲುಕಿ ಆಕೆ ಮೃತಪಟ್ಟಿದ್ದಾರೆ. ಆಕೆಯನ್ನು ಅದೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆ ಬದುಕುಳಿಯಲಿಲ್ಲ.
ಮೋಹನ್ ಆತ್ಮಹತ್ಯೆ ಸಂಬಂಧ ವಿಜಯನಗರ ಠಾಣೆ ಹಾಗೂ ತಾಯಿ ಲೀಲಾವತಿ ಅಪಘಾತ ಸಂಬಂಧ ವಿಜಯನಗರ ಸಂಚಾರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.