ಬೆಂಗಳೂರು: 38 ದಿನದ ಗಂಡು ಮಗುವಿನ ಮಾರಾಟ ಪ್ರಕರಣದಲ್ಲಿ ಮೂವರನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.
ತರನ್ನಂ ಬಾನು (38), ನಿಶಾತ್ ಕೌಸರ್ (45) ಮತ್ತು ಕೆ. ಸವುದ್ ಬಂಧಿತ ಆರೋಪಿಗಳು. ಕಳೆದ ಸೋಮವಾರ ಅಗಡಿ ಆಸ್ಪತ್ರೆ ಬಳಿ ಪುರುಷ ಹಾಗೂ ಮಹಿಳೆಯೊಬ್ಬರು ಜಗಳವಾಡುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ವಿಚಾರಿಸಿದ್ದಾರೆ. ಆ ವೇಳೆ ವಿಷಯ ತಿಳಿಸಲು ತಡಬಡಾಯಿಸಿದ ಮಹಿಳೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರು ವಿಚಾರಣೆ ಮಾಡುತ್ತಿದ್ದಂತೆ ಪುರುಷ ಅಲ್ಲಿಂದ ಪರಾರಿಯಾಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ. ಆಡುಗೋಡಿ ನಿವಾಸಿ ತರನ್ನಂ ಬಾನು ಕೆಲವು ದಿನಗಳ ಹಿಂದೆ ಆಕೆಯ ಮನೆ ಕೆಲಸದಾಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಅದನ್ನು ದೂರದ ಸಂಬಂಧಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾಳೆ.
ಮಗುವಿನ ತಂದೆ ಮುಬಾರಕ್ ಪಾಷಾ ಮಗುವಿನ ಮಾರಾಟ ಮಾಡಲು ನಿರ್ಧರಿಸಿ ಬಾನು ಜೊತೆಗೆ ವ್ಯವಹಾರ ಕುದುರಿಸಿದ್ದ. ತಾಯಿಯನ್ನು ಮನವೊಲಿಸಿದ ಬಳಿಕ ಮಗುವನ್ನು ಹೊರಗಡೆ ತಂದು ಬಾನುಗೆ ಹಸ್ತಾಂತರಿಸಿದ್ದ. ಅದನ್ನು ಆಕೆ ಮದುವೆಯಾಗಿ 15 ವರ್ಷ ಕಳೆದರೂ ಮಕ್ಕಳಿಲ್ಲದ ತನ್ನ ಸಂಬಂಧಿ ಸವುದ್ ಎಂಬುವರಿಗೆ ಮಾರಾಟ ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಆ ಮಗುವಿಗೆ 1.30 ಲಕ್ಷ ರೂ. ಕೊಡಲು ಒಪ್ಪಿದ ಸವುದ್, ಮುಂಗಡವಾಗಿ 50 ಸಾವಿರ ರೂ. ಗಳನ್ನು ಬಾನುಗೆ ನೀಡಿದ್ದರು. ಆದರೆ, ಬಾನು ಆ ಹಣದಲ್ಲಿ ಪಾಷಾನಿಗೆ ಪಾಲು ನೀಡಿರಲಿಲ್ಲವಂತೆ. ಇದಕ್ಕಾಗಿ ಪಾಷಾ, ಅಗಡಿ ಆಸ್ಪತ್ರೆ ಮುಂಭಾಗ ಬಾನು ಜೊತೆಗೆ ಜಗಳವಾಡುತ್ತಿದ್ದ. ಈ ವೇಳೆ ಆಕೆಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬಾನು ನೀಡಿದ ಹೇಳಿಕೆ ಆಧಾರದ ಮೇಲೆ ಸವುದ್ ಮತ್ತು ಕೌಶರ್ ಅವರನ್ನು ಬಂಧಿಸಲಾಗಿದೆ. ಇನ್ನು 38 ದಿನಗಳ ಗಂಡುಮಗುವನ್ನು ತಾಯಿ ಮಡಿಲಿಗೆ ಮತ್ತೆ ಸೇರಿಸಲಾಗಿದೆ. ಪಾಷಾನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.