ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 106ನೇ ಜನ್ಮದಿನದ ಪ್ರಯುಕ್ತ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಆಯೋಜಿಸಿದ್ದ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು.
ಅರಸು ಅವರ ಜನ್ಮದಿನಾಚಾರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು ಸರ್ಕಾರದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಬಿ.ಎಲ್.ಪಾಟೀಲ್, ಸುಶೀಲಮ್ಮ, ಭಾಸ್ಕರ್ ದಾಸ್ ಎಕ್ಕೂರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಸಿಎಂ ಇದೇ ವೇಳೆ ತಿಳಿಸಿದರು.
ನಮ್ಮ ಬದ್ಧತೆಯನ್ನು ತೋರಿಸಿಕೊಳ್ಳುವ ದಿನ ಇಂದು. ಹಿಂದುಳಿದ ವರ್ಗಗಳ ಸ್ವಾಭಿಮಾನ ಬದುಕಿಗೆ, ಅವರ ಏಳಿಗೆಗೆ ಸರ್ಕಾರ ಹಲವು ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗ ಕಲ್ಪಿಸಲು ಹೆಚ್ಚಿನ ಪ್ರಾಶಸ್ತ್ಯ ನೀಡಲು ಈ ದಿನ ಸಂಕಲ್ಪ ಮಾಡುತ್ತಿದ್ದೇವೆ ಎಂದರು.
ದೇವರಾಜ ಅರಸು ಅವರ ಕ್ರಾಂತಿಕಾರಿ ಭೂಸುಧಾರಣಾ ಕಾಯ್ದೆ ನಮಗೆಲ್ಲರಿಗೂ ಅತ್ಯಂತ ಸ್ಪೂರ್ತಿದಾಯಕ, ಇಂದು ಕರ್ನಾಟಕದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಘೋಷಣೆಯನ್ನು ಅಕ್ಷರಶಃ ಪಾಲಿಸಿದ ಮುಖ್ಯಮಂತ್ರಿ ದೇವರಾಜ ಅರಸು ಅವರು ಎಂದರು.
ಅರಸುರ ಅವರು ಅನೇಕ ನಾಯಕರನ್ನು ಹುಟ್ಟಿಹಾಕಿ ಬೆಳೆಸಿದ್ದಾರೆ. ಕರ್ನಾಟಕ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಪಾತ್ರ ಅವರದ್ದು, ಅವರು ಹಾಕಿಕೊಟ್ಟ ಹೆಜ್ಜೆ ಗುರುತುಗಳು ಇನ್ನೂ ಕೂಡ ಶಾಶ್ವತವಾಗಿ ರಾಜ್ಯ ರಾಜಕೀಯದಲ್ಲಿದೆ. ಅವರ ಹೆಸರಿನಲ್ಲಿ ಇಂದು ಮತ್ತು ವರ್ಷವಿಡೀ ಕಾರ್ಯಕ್ರಮವನ್ನು ವಿಶೇಷವಾಗಿ ಹಿಂದುಳಿದ ವರ್ಗಕ್ಕೆ ಸಮರ್ಪಣೆ ಮಾಡಿ ಮಾಡುತ್ತೇವೆ ಎಂದು ಘೋಷಿಸಿದರು.
ಸಚಿವ ಕೋಟ ಶೀನಿವಾಸ ಪೂಜಾರಿ, ಶಾಸಕ ಅರ್ಶದ್ ರಿಜ್ವಾನ್, ಸಂಸದ ಪಿ.ಸಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.