ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದ ಆರೋಪಡಿ 9 ತಿಂಗಳಿನಿಂದ ಜೈಲು ವಾಸ ಅನುಭವಿಸಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಶನಿವಾರ ಬಿಡುಗಡೆಯಾಗಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಅವರನ್ನು ಹಿಂಡಲಗಾ ಜೈಲಧಿಕಾರಿಗಳು ಪ್ರಕ್ರಿಯೆ ಮುಗಿಸಿ ಬಿಡುಗಡೆ ಮಾಡಿದ್ದಾರೆ. ನಿನ್ನೆಯೇ ಅವರ ಬಿಡುಗಡೆಯಾಗಬೇಕಿತ್ತು. ಆದರೆ, ಕೋರ್ಟ್ ನೀಡಿರುವ ಆದೇಶ ಜೈಲ್ ಅಧಿಕಾರಿಗಳಿಗೆ ತಲುಪಲು ಮತ್ತು ಶುಕ್ರವಾರ ಸಾರ್ವತ್ರಿಕ ರಜೆ ಇದ್ದ ಕಾರಣ ಬಿಡುಗಡೆಯಾಗಲಿಲ್ಲ. ಹೀಗಾಗಿ ಇಂದು ಜೈಲಧಿಕಾರಿಗಳು ಎಲ್ಲ ಪ್ರಕ್ರಿಯೆ ಮುಗಿಸಿ ಬಿಡುಗಡೆ ಮಾಡಿದ್ದಾರೆ.
ಇನ್ನು ಅವರು ಬಿಡುಗಡೆಯಾಗುತ್ತಿದ್ದಾರೆ ಎಂಬ ವಿಷಯ ತಿಳಿದು ಜೈಲಿನ ಹೊರಗೆ ಭಾರಿ ಸಂಖ್ಯೆಯಲ್ಲಿ ಅಪಾರ ಅಭಿಮಾನಿಗಳು, ಕುಟುಂಬಸ್ಥರು ಕಾದು ಕುಳಿತು ಅವರನ್ನು ಸ್ವಾಗತಿಸಿದರು. ಹೆಣ್ಣುಮಕ್ಕಳು ಪೂರ್ಣಕುಂಭ ಸ್ವಾಗತ ಕೋರಿದರು.
ಈ ವೇಳೆ ನೂಕುನುಗ್ಗಲು ಉಂಟಾಯಿತು, ಜನರು ಕೊರೊನಾ ನಿಯಮ ಮರೆತು ತಳ್ಳಾಡುತ್ತಿರುವುದು ಕಂಡುಬಂತು. ಪೊಲೀಸರು ಗುಂಪನ್ನು ಚದುರಿಸಲು ಹರಸಾಹಸಪಡಬೇಕಾಯಿತು.
ಮುಂಬರುವ ದಿನಗಳಲ್ಲಿ ನಾನು ಹೇಗಿರಬೇಕೆಂದು ಎಂದು ಪಾಠ ಕಲಿತಿದ್ದೇನೆ, ಇಂದು ಜಾಮೀನು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ನಿರಪರಾಧಿಯಾಗಿ ಹೊರಬರುತ್ತೇನೆ, ನನಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್ ಗೆ ಧನ್ಯವಾದ ಹೇಳುತ್ತೇನೆ ಎಂದು ವಿನಯ್ ಕುಲಕರ್ಣಿ ಹೇಳಿದರು.
ಜೈಲ್‌ನಿಂದ ಹೊರಬಂದ ಕೂಡಲೇ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನು ಮುಂದೆ ನಾನು ಬೇರೆಯದೇ ರೀತಿಯ ರಾಜಕಾರಣಿಯಾಗುತ್ತೇನೆ ಎಂದು ಹೇಳಿದರು.
ವಿನಯ್ ಕುಲಕರ್ಣಿ ಬೆಳಗಾವಿಯ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠಕ್ಕೆ ಭೇಟಿ ನೀಡಿ ಮಠದ ಅಲ್ಲಮಪ್ರಭು ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ರುದ್ರಾಕ್ಷಿಮಠಕ್ಕೆ ಭೇಟಿ ಬಳಿಕ ಮಧ್ಯಾಹ್ನ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾಂಬ್ರಾ ಏರ್‍ಪೋರ್ಟ್‍ಗೆ ತೆರಳಿ ಮಧ್ಯಾಹ್ನ 3.40ರ ಫ್ಲೈಟ್‍ಗೆ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ.