ಬೆಂಗಳೂರು: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 18 ದಿನಗಳ ಬಳಿಕ ಆನಂದ್ ಸಿಂಗ್ ಸಿಎಂ ಅವರನ್ನು ಇಂದು ಭೇಟಿ ಮಾಡಿ ಸಮಾಧಾನಕರ ಚರ್ಚೆ ನಡೆಸಿದ್ದು, ಸಚಿವರಾಗಿ ಖಾತೆ ಜವಾಬ್ದಾರಿ ನಿರ್ವಹಿಸುವುದಾಗಿ ಆನಂದ್ ಸಿಂಗ್ ಹೇಳಿದ್ದಾರೆ.
ಆನಂದ್ ಸಿಂಗ್ ರಾಜೀನಾಮೆ ವಿಚಾರ ಸದ್ಯಕ್ಕೆ ಇತ್ಯರ್ಥವಾಗಿಲ್ಲ. ಈ ಎಲ್ಲದರ ನಡುವೆ ನಾಳೆ ಸಿಎಂ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಲಿದ್ದು ಅದಕ್ಕೂ ಮುನ್ನ ಆನಂದ್ ಸಿಂಗ್ ಸಿಎಂ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೂ ದಾರಿ ಮಾಡಿಕೊಟ್ಟಿದೆ.
ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ಮುಖ್ಯಮಂತ್ರಿ ಭೇಟಿ ಬಳಿಕ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲು ಖಾತೆಯನ್ನು ನಿಭಾಯಿಸಿ ಎಂದು ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಕಿವಿಮಾತು ಹೇಳಿದ್ದಾರೆ. ಅವರ ಮಾತಿಗೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ಇನ್ನು ಅವರ ಆದೇಶದಂತೆ ನಾನು ಇಂದು ಕೆಲಸಕ್ಕೆ ಬಂದಿದ್ದೇನೆ. ಆದಾಗ್ಯೂ, ಈ ಹಿಂದೆ ಸಲ್ಲಿಸಿದ್ದ ಮನವಿಯನ್ನೇ ಇಂದೂ ಸಲ್ಲಿಸಿರುವೆ. ನನ್ನ ಮನವಿಯನ್ನು ಪರಿಗಣಿಸುವುದಾಗಿ ಸಿಎಂ ತಿಳಿಸಿದ್ದು, ವರಿಷ್ಠರ ಗಮನಕ್ಕೆ ತಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಇಂದು ನಾನು ನನ್ನ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ ಎಂದರು.
ಇಂದು ಬೆಳಗ್ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಭೇಟಿಮಾಡಿ ಕೂಡ ನನ್ನ ಮನವಿಯನ್ನು ಅಧ್ಯಕ್ಷರಿಗೆ ತಿಳಿಸಿದ್ದೇನೆ. ಮೊದಲು ಖಾತೆಯನ್ನು ನಿಭಾಯಿಸಿ ಎಂದು ಹೇಳಿದ್ದಾರೆ. ಇನ್ನು, ನಾಳೆ ಸಂಜೆ ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ. ದೆಹಲಿ ಭೇಟಿ ವೇಳೆ ಎಲ್ಲವನ್ನು ಸರಿ ಮಾಡುವ ಭರವಸೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾತುಕತೆಯ ವೇಳೆ ಸಚಿವ ಆರ್.ಅಶೋಕ್ ಮತ್ತು ಶಾಸಕ ರಾಜೂ ಗೌಡ ಸಹ ಉಪಸ್ಥಿತರಿದ್ದರು. ಹಾಗಾಗಿ ನನ್ನ ಬೇಡಿಕೆ ಈಡೇರುವ ಭರವಸೆ ಇದೆ ಎಂದು ತಿಳಿಸಿದರು.
ನಿರಂತರ ರಾಜಕೀಯ ಬೆಳವಣಿಗೆಗಳ ಬಳಿಕ ಸಚಿವ ಆನಂದ್ ಸಿಂಗ್ ವಿಕಾಸಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಸಚಿವ ಅಶೋಕ್ ಮತ್ತು ಶಾಸಕ ರಾಜುಗೌಡ ಇದ್ದರು.
ಸಚಿವ ಆನಂದ್ ಸಿಂಗ್ ಯಾವುದೇ ಬ್ಲ್ಯಾಕ್‌ಮೇಲ್ ಮಾಡಿಲ್ಲ. ತಮ್ಮ ಖಾತೆಯನ್ನು ವಹಿಸಿಕೊಂಡಿದ್ದಾರೆ. 18 ದಿನಗಳ ಕಾಲ ಖಾತೆಯನ್ನು ವಹಿಸಿಕೊಳ್ಳದ ಹಿನ್ನೆಲೆ ಮುಂದಿನ ದಿನಗಳಲ್ಲಿ 24 ಗಂಟೆಯೂ ಕೆಲಸ ಮಾಡ್ತಾರೆ ಎಂದು ವಿಕಾಸಸೌಧದಲ್ಲಿ ನಡೆದ ಸಭೆಯ ಬಳಿಕ ಬಿಜೆಪಿ ಶಾಸಕ ರಾಜುಗೌಡ ತಿಳಿಸಿದರು.