ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ತೆರಳಿದ್ದ ಉಕ್ರೇನ್ ವಿಮಾನ ಹೈಜಾಕ್ ಮಾಡಲಾಗಿದೆ. ತಮ್ಮ ವಿಮಾನವನ್ನು ಇರಾನ್‌ಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಉಕ್ರೇನ್ ಸರ್ಕಾರದ ಸಚಿವರು ಹೇಳಿದ್ದಾರೆ.
ಆದರೆ, ಕಾಬೂಲ್‌ನಿಂದ ಉಕ್ರೇನ್ ವಿಮಾನ ಹೈಜಾಕ್ ಆಗಿಲ್ಲ ಎಂದು ಇರಾನ್ ಹೇಳಿದೆ. ಇಂಧನ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಉಕ್ರೇನ್ ವಿಮಾನ ಇರಾನ್‌ಗೆ ಬಂದಿತ್ತು. ಅದು ಇಂಧನ ತುಂಬಿಸಿಕೊಂಡು ಉಕ್ರೇನ್‌ನತ್ತ ಹೋಗಿದೆ. ಉಕ್ರೇನ್ ವಿಮಾನ ನಿನ್ನೆ ರಾತ್ರಿ 9.50ಕ್ಕೆ ಕೀವ್ ಏರ್‌ಪೋರ್ಟ್ ಗೆ ತಲುಪಿದೆ ಎಂದು ಇರಾನ್ ಹೇಳಿದೆ.
ಅಫ್ಘಾನಿಸ್ತಾನದಿಂದ ಭಾನುವಾರ ಜನರನ್ನು ಸ್ಥಳಾಂತರಿಸುತ್ತಿದ್ದ ಉಕ್ರೇನಿಯನ್ ವಿಮಾನವನ್ನು ಸಶಸ್ತ್ರ ಅಪಹರಣಕಾರರು ಅಪಹರಿಸಿದ್ದಾರೆ. ಇದನ್ನು ಇರಾನ್‌ಗೆ ಹಾರಾಟ ನಡೆಸಿದ್ದಾರೆ ಎಂದು ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ಮಂಗಳವಾರ ರಷ್ಯಾದ ಟಿಎಎಸ್ಎಸ್ ಮಾಧ್ಯಮಕ್ಕೆ ತಿಳಿಸಿದ್ದರು. ಉಕ್ರೇನ್ ವಿಮಾನ ಹೈಜಾಕ್ ಆಗಿದೆ ಎಂಬ ಸುದ್ದಿ ಹಬ್ಬುತ್ತಲೇ ವಿಮಾನ ಹೈಜಾಕ್ ಆಗಿಲ್ಲ ಎಂದು ಇರಾನ್ ಹೇಳಿದೆ.
ಭಾನುವಾರವೇ ವಿಮಾನವೇ ಹೈಜಾಕ್ ಆಗಿದ್ದು, ಕೆಲ ಅಪರಿಚಿತರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಉಕ್ರೇನ್ ಸರ್ಕಾರ ಹೇಳಿದೆ. ಉಕ್ರೇನ್ ಡೆಪ್ಯೂಟಿ ವಿದೇಶಾಂಗ ಮಂತ್ರಿ ಯೆವ್ಗೆನಿ ಯೆನಿನ್, ಭಾನುವಾರ ಕೆಲ ಅಪರಿಚಿತರು ವಿಮಾನ ಹೈಜಾಕ್ ಮಾಡಿದ್ದು, ಇರಾನ್ ನತ್ತ ತೆಗೆದುಕೊಂಡು ಹೋಗಿದ್ದಾರೆ. ನಮ್ಮ ಜನರು ಏರ್ ಪೋರ್ಟ್ ತಲುಪದ ಕಾರಣ ವಿಮಾನವನ್ನು ನಿಗದಿತ ಪ್ಲಾನ್ ನಂತೆ ಮೂರು ಸ್ಥಳಗಳಿಗೆ ತೆಗೆದುಕೊಂಡು ಹೋಗಲು ವಿಫಲವಾಗಿದ್ದೇವೆ ಎಂದು ಹೇಳಿದ್ದಾರೆ.
ವಿಮಾನ ಈಶಾನ್ಯ ಇರಾನಿನ ಮಶಹದ್ ಏರ್ ಪೋರ್ಟ್ ಗೆ ಬಂದಿತ್ತು. ಅಲ್ಲಿ ರೀಪ್ಯೂಲಿಂಗ್ ಬಳಿಕ ಉಕ್ರೇನ್ ನತ್ತ ಟೇಕಾಫ್ ಆಗಿತ್ತು. ನಂತರ ಕಿವ್ ವಿಮಾನ ನಿಲ್ದಾಣದಲ್ಲಿ ಅದು ಲ್ಯಾಂಡ್ ಆಗಿತ್ತು ಎಂದು ಇರಾನ್ ಮಂತ್ರಿ ಅಬ್ಬಾಸ್ ಅಸ್ಲಾನಿ ಮಾಹಿತಿ ನೀಡಿದ್ದಾರೆ.
ವಿಮಾನ ಹೈಜಾಕ್ ಮಾಡಿದವರು ಶಸ್ತ್ರಸಜ್ಜಿತರಾಗಿದ್ದರು. ಆದ್ರೆ ಇದುವರೆಗೂ ಈ ವಿಮಾನ ಹೈಜಾಕ್ ಮಾಡಿದವರು ಯಾರು ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗುತ್ತಿದ್ದಂತೆ ಉಕ್ರೇನ್ ನಿರಂತರವಾಗಿ ತನ್ನ ಜನರನ್ನು ಏರ್ ಲಿಫ್ಟ್ ಮಾಡುತ್ತಿದೆ.
ತಾಲಿಬಾನಿಗಳು ಕಾಬೂಲ್ ನಗರ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಭಾರತ, ಫ್ರಾನ್ಸ್, ಉಕ್ರೇನ್, ಜರ್ಮನಿ, ಬ್ರಿಟನ್, ಅಮೆರಿಕ ತನ್ನ ಪ್ರಜೆಗಳನ್ನು ಕರೆಸಿಕೊಳ್ಳುತ್ತಿದೆ. ನಾಟೋ ದೇಶಗಳ ಜೊತೆ ಸೇರಿ ಕಾಬೂಲ್ ವಿಮಾನ ನಿಲ್ದಾಣವನ್ನು ಅಮೆರಿಕ ತನ್ನ ನಿಯಂತ್ರಣದಲ್ಲಿರಿಸಿಕೊಂಡಿದೆ. ಅಮೆರಿಕದ ಸಹಾಯದಿಂದ ಇನ್ನಿತರ ದೇಶಗಳು ಪ್ರಜೆಗಳ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ.
ಕೆಲ ವರದಿಗಳ ಪ್ರಕಾರ, ಕಾಬೂಲ್ ನಿಂದ ಕಿವ್ ವರೆಗೂ 83 ಜನರನ್ನು ಕರೆದುಕೊಂಡು ಬರಲಾಗಿತ್ತು. ಇದರಲ್ಲಿ 31 ಉಕ್ರೇನ್ ಪ್ರಜೆಗಳಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಅಫ್ಘಾನಿಸ್ತಾದಲ್ಲಿ 100 ಉಕ್ರೇನ್ ಪ್ರಜೆಗಳಿದ್ದು, ಅವರನ್ನು ವಾಪಸ್ ಕರೆಸಿಕೊಳ್ಳುವ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ.