ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ನಡೆದ ನಾಲ್ಕು ತಿಂಗಳ ಬಳಿಕ ಪ್ರತಿಭಟನೆ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರನ್ನು ವಜಾ ಮಾಡಿ ಬಿಎಂಟಿಸಿ ಇದೇ 18ರಂದು ಆದೇಶ ಹೊರಡಿಸಿದೆ.
ಬಿಎಂಟಿಸಿ ಘಟಕ 33ರಲ್ಲಿ ಚಾಲಕರಾಗಿರುವ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷರೂ ಆದ ಚಂದ್ರಶೇಖರ್ ಅವರು ಏಪ್ರಿಲ್ 6-2021 ರಿಂದ ಹಮ್ಮಿಕೊಂಡಿದ್ದ ಕಾನೂನುಬಾಹಿರ ಮುಷ್ಕರದಲ್ಲಿ ಭಾಗಿಯಾಗಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿರುವ ಬಗ್ಗೆ ಮುಖ್ಯ ಮತ್ತು ಜಾಗೃತಾಧಿಕಾರಿ ಅವರು ವಿವರವಾದ ವರದಿ ಸಲ್ಲಿಸಿದ್ದರು, ಆ ಆಧಾರದ ಮೇರೆಗೆ ಚಂದ್ರಶೇಖರ್ ಅವರನ್ನು ಮುಷ್ಕರದ ಸಮಯದಲ್ಲಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಆ ನಂತರದ ದಿನಗಳಲ್ಲಿ ವಿಚಾರಣೆ ಮಾಡಿದ ಬಳಿಕ ಅವರು ಕಾನೂನು ಬಾಹಿರ ಮುಷ್ಕರದಲ್ಲಿ ಭಾಗಿಯಾಗಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿರುವ ಪ್ರಕರಣದ ಕಡತವು ಶಿಸ್ತುಪಾಲನೆ ಪ್ರಾಧಿಕಾರದ ಅಧಿಕಾರಿಯೂ ಆದ ತನ್ನ ಪರಿಶೀಲನೆ ಹಾಗೂ ಅಂತಿಮ ಆದೇಶಕ್ಕಾಗಿ ಮಂಡಿಸಲಾಗಿತ್ತು.
ಈ ಪ್ರಕರಣ ಸಂಬಂಧ ಕಡತದಲ್ಲಿನ ದಾಖಲಾತಿ, ಸಾಕ್ಷಿ ಪುರಾವೆಗಳು, ವಿಚಾರಣಾ ನಡವಳಿಗಳು ಹಾಗೂ ವಿಚಾರಣ ನಿರ್ಣಯವನ್ನು ವಿಭಾಗೀಯ ನಿಯಂತ್ರಣಾಧಿಕಾರಿ ದಕ್ಷಿಣ ವಲಯ ಹಾಗೂ ಶಿಸ್ತುಪಾಲನೆ ಅಧಿಕಾರಿಯಾದ ನಾನು ಕೂಲಂಕಶವಾಗಿ ಪರಿಶೀಲಿಸಿದ ಬಳಿಕ ಅವರು ಕಾನೂನು ಬಾಹಿರ ಮುಷ್ಕರದಲ್ಲಿ ಭಾಗಿಯಾಗಿ ಕರ್ತವ್ಯಕ್ಕೆ ಅನಧಿಕೃತವಾಗಿ ಆಗಿರುವುದು ಮತ್ತು ಸಹ ನೌಕರರನ್ನು ಪ್ರಚೋದಿಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ವಜಾ ಮಾಡಲಾಗಿದೆ ಎಂದು ಬಿಎಂಟಿಸಿ ದಕ್ಷಿಣ ವಲಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಜಗದೀಶ್ ತಿಳಿಸಿದ್ದಾರೆ.
ಒಟ್ಟಾರೆ ಏಪ್ರಿಲ್ 7ರಿಂದ 15 ದಿನಗಳವರೆಗೆ ನಡೆದ ಮುಷ್ಕರದ ವೇಳೆ ಅಂದಾಜು 20 ಸಾವಿರ ನೌಕರರನ್ನು ವಜಾ, ಅಮಾನತು ಮತ್ತು ವರ್ಗಾವಣೆ ಮಾಡಲಾಗಿತ್ತು. ಆ ವೇಳೆ ಚಂದ್ರಶೇಖರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ಇನ್ನು ಮುಷ್ಕರದ ನೇತೃತ್ವ ವಹಿಸಿದ್ದ ಚಂದ್ರ ಶೇಖರ್ ಅವರನ್ನು ಬರಿ ಅಮಾನತು ಮಾಡಿದ್ದಾರೆ. ಏನೂ ತಪ್ಪನ್ನೇ ಮಾಡದ ನಮ್ಮನ್ನು ವಜಾ ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ವಜಾ ಗೊಂಡಿರುವ ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಚಂದ್ರಶೇಖರ್ ವಿರುದ್ಧದ ವಿಚಾರಣೆ ಮುಂದುವರಿಸಿದ ಬಿಎಂಟಿಸಿ ದಕ್ಷಿಣ ವಲಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಜಗದೀಶ್ ಮುಷ್ಕರ ನಡೆದ ನಾಲ್ಕು ತಿಂಗಳ ಬಳಿಕ ಈ ಆದೇಶ ಹೊರಡಿಸಿದ್ದಾರೆ.