ಆನೇಕಲ್: ಲೆಕ್ಕದಲ್ಲಿ ಎಡವಟ್ಟು ಮಾಡಿದ ಆರೋಪಕ್ಕೆ ಪ್ರತಿಯಾಗಿ ಬಿಲ್ ಕಲೆಕ್ಟರ್ ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ ಘಟನೆ ಆನೇಕಲ್ನಲ್ಲಿ ನಡೆದಿದೆ.
ಸಿಡಿಹೊಸಕೋಟೆಯ ನಿವಾಸಿ ಚಂದ್ರಶೇಖರ್(ರವಿ) ಆತ್ಮಹತ್ಯೆಗೆ ಯತ್ನಿಸಿದವರು.
ಆನೇಕಲ್ ತಾಲೂಕಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಈ ಘಟನೆ ನಡೆದಿದೆ.
ಹಿಂದೆ ಇದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕರ ವಸೂಲಿಗಾರನ ವಿರುದ್ಧ ಟ್ಯಾಕ್ಸ್ ವಸೂಲಿಯಲ್ಲಿ ಅಕ್ರಮದ ಆರೋಪ ಹೊರಿಸಿ ನೋಟಿಸ್ ನೀಡಿದ್ದರು. ಇದರಿಂದ ಮನ ನೊಂದ ಚಂದ್ರಶೇಖರ್ ಸಭೆಯಲ್ಲಿಯೇ ಮಾತಿಗೆ ಮಾತು ಬೆಳೆದು ವಿಷ ಸೇವಿಸಿದ್ದರು.
ತಕ್ಷಣವೇ ಜೊತೆಗಿದ್ದ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಸದ್ಯ ಚಿಕಿತ್ಸೆ ನೀಡಲಾಗಿದ್ದು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಸ್ಥಳಕ್ಕಾಗಮಿಸಿದ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಚುರುಕುಗೊಳಿಸಿದ್ದಾರೆ.