ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಜನರನ್ನು ಬೆಚ್ಚಿ ಬೀಳಿಸಿದ ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಆರೋಪಿಗಳನ್ನು ಪ್ರಕರಣದ ನಡೆದ 85ಗಂಟೆಯೊಳಗೆ ಪೊಲೀಸರು ವಶಕ್ಕೆ ಪಡೆಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಘಟನೆ ನಡೆದ 85 ಗಂಟೆ ಬಳಿಕ ಅಂದರೆ ಶನಿವಾರ ಬೆಳಗ್ಗೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ಓರ್ವ ತಲೆಮರೆಸಿಕೊಂಡಿದ್ದು ಆತನ ಪತ್ತೆಗೂ ಬಲೆ ಬೀಸಲಾಗಿದೆ.
ಇನ್ನು ಸಿಕ್ಕಿರುವ ನಾಲ್ವರು ತಮಿಳು ನಾಡು ಮೂಲದವರು ಎಂದು ತಿಳಿದುಬಂದಿದೆ. ಅತ್ಯಾಚಾರ ಪ್ರಕರಣ ನಡೆದ ಬಳಿಕ ತಮಿಳುನಾಡಿಗೆ ಪರಾರಿಯಾಗಿದ್ದರು ಎಂದು ಹೇಳಲಾಗುತ್ತಿದೆ. ತಮಗೆ ಸಿಕ್ಕಿದ ತಾಂತ್ರಿಕ ಸಾಕ್ಷ್ಯಾಧಾರಗಳ ಮೇಲೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಹೆಚ್ಚಿನ ಮಾಹಿತಿ ಪಡೆದ ನಂತರ ಪೊಲೀಸರಿಗೆ ಘಟನೆ ಬಗ್ಗೆ ಇನ್ನಷ್ಟು ಸಾಕ್ಷ್ಯಾಧಾರಗಳು ಸಿಗಲಿದ್ದು ಇನ್ನೂ ಒಂದಿಬ್ಬರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ನಿನ್ನೆ ಸಂತ್ರಸ್ತೆ ಯುವತಿಯ ಗೆಳೆಯನ ಹೇಳಿಕೆಯನ್ನು ಪೊಲೀಸರು ಪಡೆದಿದ್ದರು. ಅಲ್ಲದೆ ಅತ್ಯಾಚಾರ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿ ಅಲ್ಲಿ ಸಿಕ್ಕಿದ ಮದ್ಯದ ಬಾಟಲಿಗಳನ್ನು ಪರಿಶೀಲಿಸಿದ್ದರು. ಆರೋಪಿಗಳ ಮೊಬೈಲ್ ಟವರ್ ಲೊಕೇಶನ್ ಜಾಡನ್ನು ಹಿಡಿದು ಸಾಗಿದ್ದರು. ಪೊಲೀಸರಿಂದ ಅಧಿಕೃತ ಮಾಹಿತಿ ಇನ್ನು ಕೆಲ ಹೊತ್ತಿನಲ್ಲಿ ಹೊರಬೀಳುವ ನಿರೀಕ್ಷೆಯಿದೆ.
ಆಗಸ್ಟ್ 24 ಮಂಗಳವಾರ ಸಾಯಂಕಾಲ 7ರಿಂದ 7-30ರ ಹೊತ್ತಿಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಿರ್ಜನ ಪ್ರದೇಶಕ್ಕೆ ತೆರಳಿದ್ದ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯನ ಮೇಲೆ ಹಲ್ಲೆ ನಡೆಸಿದ್ದ ಕಾಮಾಂಧರ ಗುಂಪು ವಿದ್ಯಾರ್ಥಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿತ್ತು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಸಾಂಸ್ಕೃತಿಕ ನಗರ ಮೈಸೂರಿಗೆ ಒಂದು ಕಪ್ಪು ಚುಕ್ಕೆಯಂತಾಗಿದೆ.
ಗೃಹ ಸಚಿವರಿಂದ ಸಿಎಂ ಭೇಟಿ: ಮೈಸೂರು ಹಾಗೂ ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಗ್ಯಾಂಗ್ ರೇಪ್ ಆರೋಪಿಗಳ ವಶವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ. ಪ್ರಕರಣದ ಬೆಳವಣಿಗೆ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡುತ್ತಿದ್ದಾರೆ.
ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಇನ್ನೆರಡು ಗಂಟೆಯೊಳಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿಗಳ ಬಂಧನವಾಗಿದೆ, ಅದಕ್ಕಿಂತ ಹೆಚ್ಚು ಈಗ ಹೇಳುವುದಿಲ್ಲ ಎಂದರು.
ಇತ್ತ ಬೆಂಗಳೂರಿನಿಂದ ಡಿಜಿಪಿ ಪ್ರವೀಣ್ ಸೂದ್ ಅವರು ಮೈಸೂರಿಗೆ ಹೊರಟಿದ್ದಾರೆ. ರಾಜ್ಯದ ಪೊಲೀಸರಿಗೆ ಒಂದು ರೀತಿ ಸವಾಲಾಗಿದ್ದ ಪ್ರಕರಣವನ್ನು ಸದ್ಯಕ್ಕೆ ಬೇಧಿಸಿದಂತೆ ಕಂಡುಬರುತ್ತಿದೆ.