NEWSನಮ್ಮರಾಜ್ಯ

ಬಳ್ಳಾರಿಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಭೇಟಿ ಮಾಡಿದ ನೌಕರರ ಕೂಟ : ವಜಾ, ಪೊಲೀಸ್‌ ಪ್ರಕರಣ ಸೇರಿ ಇತರ ಕೇಸುಗಳ ರದ್ದತಿಗೆ ಮನವಿ

ವಿಜಯಪಥ ಸಮಗ್ರ ಸುದ್ದಿ

ಬಳ್ಳಾರಿ: ಸಾರಿಗೆ ಮುಷ್ಕರದ ಸಮಯದಲ್ಲಿ ಆಗಿರುವ ನೌಕರರ ವಜಾ, ಪೊಲೀಸ್‌ ಪ್ರಕರಣ, ವರ್ಗಾವಣೆ ಮತ್ತು ಅಮಾನತು ಪ್ರಕರಣಗಳನ್ನು ರದ್ದುಗೊಳಿಸುವಂತೆ ಸಾರಿಗೆ ಸಚಿವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರನ್ನು ಬಳ್ಳಾರಿಯಲ್ಲಿ ಶನಿವಾರ ಬೆಳಗ್ಗೆ ಭೇಟಿ ಮಾಡಿದ ಕೂಟದ ಪದಾಧಿಕಾರಿಗಳು ಸಾರಿಗೆ ನೌಕರರ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದು, ಈ ವೇಳೆ ಸಚಿವರಿಗೆ ನೌಕರರು ಅನುಭವಿಸುತ್ತಿರುವ ಕಷ್ಟ-ನಷ್ಟಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅಲ್ಲದೆ ಶುಕ್ರವಾರ ಕೋರ್ಟ್ ನಲ್ಲಿ ನಡೆದ ವಿಚಾರಣೆ ಬಗ್ಗೆಯೂ ವಿವರಿಸಿದ್ದು,  ನಿಮ್ಮ ಬಳಿ ಇರುವ ದಾಖಲೆಗಳನ್ನು ಕೊಡಿ ಎಂದು ಸಚಿವರು ಕೇಳಿದ್ದಾರೆ ಎಂದು ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ತಿಳಿಸಿದ್ದಾರೆ.

ಇನ್ನು ನೌಕರರಿಗೆ ಸಂಬಂಧಪಟ್ಟ ಆ ಅಂಕಿ ಅಂಶಗಳನ್ನೊಳಗೊಂಡ ದಾಖಲೆಗಳನ್ನು ಅತಿ ಶೀಘ್ರದಲ್ಲೇ ನೀಡಿದರೆ ಆದಷ್ಟು ಬೇಗ ವಜಾ, ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಪ್ರಕರಣಗಳು ಸೇರಿ ಇತರ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಡುತ್ತೇವೆ ಎಂದು ಸಚಿವರ ಸಂಪೂರ್ಣ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.

ಹೀಗಾಗಿ ನಾವು ಸಚಿವರ ಬಗ್ಗೆ ಪೂರ್ಣವಿಶ್ವಾಸವಿಟ್ಟಿದ್ದು, ಯಾವ ನೌಕರರು ಯಾವುದೇ ವಿಷಯಕ್ಕೂ ಆತಂಕ ಪಡಬೇಡಿ, ಇತರರು ಬೇರೆ ಏನು ಹೇಳಿದರು ತಲೆ ಕೆಡಿಸಿಕೊಳ್ಳಬೇಡಿ. ಎಲ್ಲ ಸಮಸ್ಯೆಗಳು ಅತಿಶೀಘ್ರದಲ್ಲೇ ಬಗೆಹರಿಯಲಿವೆ ಎಂದು ಹೇಳಿದ್ದಾರೆ.

ಸಾರಿಗೆ ಸಚಿವರಿಗೆ ಕೂಟದಿಂದ ಮನವಿ: ಬಿಸಿಲು, ಮಳೆ, ಚಳಿ- ಗಾಳಿ, ಹಬ್ಬ-ಹರಿದಿನ ಎನ್ನದೆ ಅತಿ ಹೆಚ್ಚು ಸಮಯ ಒತ್ತಡದಲ್ಲೇ ಕುಟುಂಬವನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರದ ಒಂದು ಅಂಗವಾಗಿರುವ ನಾವು ಇತರ ಇಲಾಖೆಯ ನಿಗಮಗಳಿಗೆ ಹೋಲಿಸಿದರೆ ಕಡಿಮೆ ವೇತನ ಪಡೆಯುತ್ತಿದ್ದು, ಆರೋಗ್ಯ ಸೇರಿದಂತೆ ಹಲವು ಸೌಲಭ್ಯಗಳಿಂದಲೂ ವಂಚಿತರಾಗಿದ್ದೇವೆ.

ಕಳೆದ ನಾಲ್ಕು ವರ್ಷಗಳಿಂದ ಈ ಎಲ್ಲ ಕಷ್ಟ-ನಷ್ಟ ಅನುಭವಿಸಿಕೊಂಡು ಶಾಂತಿಯುತವಾಗಿ ಹೋರಾಟ ಮಾಡುತ್ತಾ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದೆವು. ಎಲ್ಲ ಸವಲತ್ತುಗಳನ್ನು ನಮ್ಮ ಜನಪರವಾದ ಸರ್ಕಾರ ಇರುವಾಗ ಮಾತ್ರ ಪಡೆಯಬಹುದೆಂದು ಗಮನಸೆಳೆಯಲು ಡಿಸೆಂಬರ್‌ನಲ್ಲಿ ಹೋರಾಟ ಮಾಡಿದ್ದೇವೆ ಹೊರತು ನಮಗೆ ಅನ್ಯ ಉದ್ದೇಶ ಇರಲಿಲ್ಲ.

ಇನ್ನು ಆ ವೇಳೆ ಸರ್ಕಾರವೇ ಕೊಟ್ಟ ಭರವಸೆಯನ್ನು ನಾಲ್ಕು ತಿಂಗಳು ಕಳೆದರೂ ಈಡೇರಿಸದೆ ಇದ್ದ ಕಾರಣ ಕೊಟ್ಟ ಭರವಸೆಗಳ ಈಡೇರಿಕೆ ಆಗ್ರಹಿಸಿ ಏಪ್ರಿಲ್‌ನಲ್ಲಿ ಸಾರಿಗೆ ಮುಷ್ಕರ ಮಾಡಿದ ಸಂದರ್ಭದಲ್ಲಿ ಸಂಸ್ಥೆ ಶಿಸ್ತು ಕ್ರಮದ ಹೆಸರಿನಲ್ಲಿ ಹಲವಾರು ನೌಕರರನ್ನು (ಮಹಿಳಾ, ಅಂಗವಿಕಲ ಸಿಬ್ಬಂದಿಗಳು ಎಂದು ಸಹ ನೋಡದೆ) ದೂರದ ಸ್ಥಳಗಳಿಗೆ (ಸುಮಾರು 300 ರಿಂದ 450 ಕಿಲೋಮೀಟರ್) ವರ್ಗಾವಣೆ ಮಾಡಿದ್ದು ನೌಕರರು ಸಂಕಷ್ಟ ಎದುರಿಸುವಂತಾಗಿದೆ.

ಇನ್ನು ಮಹಿಳಾ ಸಿಬ್ಬಂದಿ ಹಾಗೂ ಇತರ ನೌಕರರು ತಮ್ಮ ಕುಟುಂಬವನ್ನು ಬಿಟ್ಟು ದೂರದ ಸ್ಥಳಗಳಲ್ಲಿ ಕೆಲಸ ನಿರ್ವಹಿಸಲು ತುಂಬಾ ಕಷ್ಟವಾಗುತ್ತಿದೆ. ಇದಿಷ್ಟೇ ಸಾಲದು ಎಂಬಂತೆ ಮತ್ತಷ್ಟು ನೌಕರರನ್ನು ಸೇವೆಯಿಂದ ವಜಾ ಮಾಡಿದ್ದು, ಇವರೆಲ್ಲ ತಮ್ಮ ಜೀವನದ ಆದಾಯದ ಮೂಲವನ್ನೇ ಕಳೆದುಕೊಂಡಂತಾಗಿದೆ.

ಅಲ್ಲದೆ ನಿವೃತ್ತಿ ಅಂಚಿನಲ್ಲಿರುವ ನೌಕರರು ಒಳಗೊಂಡಂತೆ ಸಾವಿರಾರು ನೌಕರರನ್ನು ವಜಾ ಮಾಡಿದ್ದಾರೆ. ಇದರಿಂದ ನಾಲ್ಕು ತಿಂಗಳಿಂದ ವೇತನವಿಲ್ಲದೆ ಜೀವನ ನಿರ್ವಹಣೆಯೇ ಕಷ್ಟವಾಗಿದೆ.

ನೌಕರರು ಅಧಿಕಾರಿಗಳ ನಡೆಯಿಂದ ಬೇಸತ್ತಿದ್ದು, ಜೀವನವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಅಧಿಕಾರಿಗಳು ಕ್ಷುಲ್ಲಕ ಕಾರಣಗಳಿಗೆ ಅಮಾನತು ಮಾಡಿ ಮತ್ತಷ್ಟು ಕಷ್ಟ ನೀಡುತ್ತಿದ್ದಾರೆ. ಈಗ ಮುಷ್ಕರದ ಸಮಯದಲ್ಲಿ ಕರ್ತವ್ಯಕ್ಕೆ ಬಂದಿಲ್ಲ ಎಂಬ ಕಾರಣ ನೀಡಿ ಕಲಂ -23 ಸೇರಿ ಇತರ ನಿಯಮಗಳಡಿಯಲ್ಲಿ ಆರೋಪ ಪತ್ರಗಳನ್ನು ನೀಡಿ ಗಾಯದ ಮೇಲೆ ಬರೆಎಳೆಯುತ್ತಿದ್ದಾರೆ. ಮುಷ್ಕರದ ಸಮಯದಲ್ಲಿ ರಾಜ್ಯಾದ್ಯಂತ ಅನೇಕ ನೌಕರರ ಮೇಲೆ ಶೇ.95ರಷ್ಟು ಸುಳ್ಳು ಕೇಸ್‌ಗಳನ್ನು ದಾಖಲಿಸಿದ್ದಾರೆ.

ಆದ್ದರಿಂದ ತಾವು ಈ ಕೂಡಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕೂ ನಿಗಮಗಳಲ್ಲಿ ಸಾರಿಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ, ವರ್ಗಾವಣೆ ಹಾಗೂ ಅಮಾನತು ಪ್ರಕರಣಗಳನ್ನು ರದ್ದುಪಡಿಸಿ ನೌಕರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು, ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಯಗಳಿಗೆ ಮತ್ತೆ ನಿಯೋಜಿಸಿ ಸಾರಿಗೆ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಮೂಲಕ ಸಾರಿಗೆ ನೌಕರರ ಪಾಲಿನ ದೇವರಾಗಬೇಕು.

ತಮಗೆ ತಿಳಿದಿರುವಂತೆ ಈ ಹೋರಾಟದ ಹಾದಿಯಲ್ಲಿ ಆಡಳಿತವರ್ಗ ಮುಷ್ಕರ ಸಮಯದಲ್ಲಿ ನೌಕರರ ವಿರುದ್ಧ ತೆಗೆದುಕೊಂಡ ಕ್ರಮಗಳಾದ ವರ್ಗಾವಣೆ, ವಜಾ ಅಮಾನತು ಮತ್ತು ಪೊಲೀಸ್ ಪ್ರಕರಣಗಳನ್ನು ತೆರವುಗೊಳಿಸಿ ಏಪ್ರಿಲ್ 6- 2021ರ ಸಂದರ್ಭದಲ್ಲಿ ಇದ್ದಂತಹ ಸ್ಥಿತಿಗೆ ತರಬೇಕೆಂದು ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು