ತಿ.ನರಸೀಪುರ: ನನಗೆ ರಾಜಕೀಯವಾಗಿ ಜನ್ಮ ನೀಡಿದ ಜೆಡಿಎಸ್ ಪಕ್ಷವನ್ನು ಎಂದಿಗೂ ತೊರೆಯುವುದಿಲ್ಲ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಹೇಳಿದ್ದಾರೆ.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಬಂದಿದ್ದೇನೆ, ಜೆಡಿಎಸ್ ನಲ್ಲೇ ಇರುತ್ತೇನೆ ನಮ್ಮ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳಿಗೆ ತೆರೆ ಎಳೆದರು.
ಮಾಧ್ಯಮಗಳಲ್ಲಿ ಅಶ್ವಿನ್ ಕುಮಾರ್ ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಬರುತ್ತಿದೆ. ಅಶ್ವಿನ್ ಕುಮಾರ್ ಕಾಂಗ್ರೆಸ್ ಸೇರ್ತಾರೆ ಎನ್ನುವುದು ಶುದ್ಧ ಸುಳ್ಳು. ನನ್ನ ಮೇಲೆ ಅಪಪ್ರಚಾರ ಮಾಡಲು ಮಾಡುತ್ತಿರುವ ಪಿತೂರಿ ಇದು. ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ತೊರೆಯಲ್ಲ ಎದು ಸ್ಪಷ್ಟನೆ ನೀಡಿದರು.
ಇನ್ನು ಕುಮಾರಣ್ಣ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಯಾವತ್ತೂ ಮೋಸ ಮಾಡಲ್ಲ. ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಎಲ್ಲೋ ಇದ್ದ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದೂ ಕುಮಾರಣ್ಣ. ನನ್ನ ರಾಜಕೀಯ ಗುರುಗಳು ಕುಮಾರಸ್ವಾಮಿ ಯವರು. ಅವರು ಮತ್ತು ಪಕ್ಷವನ್ನು ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ಹೇಳಿದರು.
ಸದ್ಯದಲ್ಲಿಯೇ ಜಿಲ್ಲಾ ಪಂಚಾಯಿತಿ ಹಾಗೂ ತಾಪಂ ಚುನಾವಣೆಗೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ತಿಳಿಸಿದ ಅವರು, ವಿಪಕ್ಷದವರು ಮತ್ತು ಆ ಪಕ್ಷದ ಕಾರ್ಯಕರ್ತರು ಜಿಪಂ ಮತ್ತು ತಾಪಂ ಚುನಾವಣೆ ಮುಂದಿಟ್ಟುಕೊಂಡು ಸುಳ್ಳಿನ ಸರಮಾಲೆಯನ್ನೆ ಹಬ್ಬಿಸುತ್ತಿದ್ದಾರೆ ಅವರ ಯಾರ ಮಾತಿಗೂ ಕಿವಿ ಕೊಡಬಾರದು ಎಂದು ಸಲಹೆ ನೀಡಿದರು.
ಇನ್ನು ಈ ಹಿಂದೆಯೂ ಬಿಜೆಪಿಗೆ ಅನೇಕರು ಸೇರ್ಪಡೆಯಾಗುವಂತೆ ಸಲಹೆ ನೀಡಿದ್ದರೂ ನನ್ನ ನಿಷ್ಠೆ ಜೆಡಿಎಸ್ ಪಕ್ಷಕ್ಕೆ ಎಂದು ಹೇಳಿದ್ದೆ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಚಿಂತೆಯು ಮಾಡಿಲ್ಲ. ಜತೆಗೆ ನಾನು ಯಾವುದೇ ಮಾಧ್ಯಮಗಳ ಮುಂದೆ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿಕೆ ನೀಡಿಲ್ಲದಿದ್ದರೂ ಕೆಲವು ಮಾಧ್ಯಮಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.