ಗದಗ: ಮುಷ್ಕರ ಸಂದರ್ಭದಲ್ಲಿ ವಜಾ, ವರ್ಗಾವಣೆ, ಅಮಾನತು ಗೊಂಡಿರುವವರನ್ನು ಅವರ ಮೂಲ ಸ್ಥಾನದಲ್ಲೇ ಕರ್ತವ್ಯಕ್ಕೆ ಮತ್ತೆ ತೆಗೆದುಕೊಳ್ಳುವ ಜವಾಬ್ದಾರಿಯನ್ನು ನನಗೆ ಬಿಡಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ನೌಕರರಿಗೆ ಭರವಸೆ ನೀಡಿದ್ದಾರೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಗದಗ ಕೆಎಸ್‌ಆರ್‌ಟಿಸಿ ಘಟಕಕ್ಕೆ ಇಂದು ಸಂಜೆ ಭೇಟಿ ನೀಡಿ ನೌಕರರ ಸಮಸ್ಯೆ ಅಲಿಸಿದ ಬಳಿಕ ಮಾತನಾಡಿದ ಸಚಿವರು, ವರ್ಗಾವಣೆಗೊಂಡಿರುವವರನ್ನು ಮೂಲಸ್ಥಾನಗಳಿಗೆ ವರ್ಗಾವಣೆ ಮಾಡಲು ನಾನು ಕೂಡ ಒಂದು ಪಟ್ಟಿಯನ್ನು ಮಾಡಿಕೊಂಡು ಅದನ್ನು ಸರಿಪಡಿಸುತ್ತೇನೆ ಎಂದು ವಾಗ್ದಾನ ಮಾಡಿದರು.
ಇದಿಷ್ಟೇ ಅಲ್ಲದೆ, ಮುಷ್ಕರದ ಸಮಯದಲ್ಲಿ ಆಗಿರುವ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿ ನಿಮಗೆ ಡಿಪೋ ಮಟ್ಟದಲ್ಲಿ ಯಾವುದೇ ಕಿರುಕುಳ ಆಗದ ರೀತಿ ನೋಡಿಕೊಳ್ಳುತ್ತೇನೆ. ನೀವು ವೇತನ ಪರಿಷ್ಕರಣೆ ವಿಚಾರವನ್ನು ನನಗೆ ಬಿಡಿ, ನಾನು ಅದನ್ನು ಮಾಡುತ್ತೇನೆ. ನೀವು ನಿಮ್ಮ ಕೆಲಸ ಮಾಡಿಕೊಂಡು ಹೋಗಿ ಎಂದು ಸಲಹೆ ನೀಡಿದರು.
ಪ್ರಸ್ತುತ ಸಾರಿಗೆಯ ನಾಲ್ಕೂ ನಿಗಮಗಳು ಸುಮಾರು 1,171 ಕೋಟಿ ರೂ. ನಷ್ಟ ಅನುಭವಿಸುತ್ತಿವೆ ಎಂದು ಹೇಳಲಾಗುತ್ತಿದೆ. ಇಂಥ ನಷ್ಟದ ಪರಿಸ್ಥಿತಿಯಲ್ಲಿ ನಾನು ಸಚಿವನಾಗಿ ಬಂದಿರುವುದು ನನಗೂ ಒಂದು ಸವಾಲೆ ಅಗಿದೆ. ಹೀಗಾಗಿ ನೀವು ನಾನು ಎಲ್ಲರೂ ಜತೆಗೆ ಕೈ ಜೋಡಿಸಿ ನಿಗಮಗಳನ್ನು ಲಾಭದತ್ತಕೊಂಡೊಯ್ಯಬೇಕಿದೆ. ನಾನು ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇನೆ, ನಿಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಅದೇ ರೀತಿ ನೀವು ನನಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಹಿಂದೆ ಸಾರಿಗೆ ಇಲಾಖೆ ಮಂತ್ರಿ ಆಗಬೇಕು ಎಂದರೆ ಪೈಪೋಟಿ ಇರುತ್ತಿತ್ತು. ಸಾರಿಗೆ ಇಲಾಖೆ ನನಗೆ ಬೇಕು ನನಗೆ ಬೇಕು ಎನ್ನುತ್ತಿದ್ದರು. ಆದರೆ ಈಗ ನಷ್ಟದಲ್ಲಿದೆ ಎಂದು ಯಾರೊಬ್ಬರು ಈ ಇಲಾಖೆಯ ಜವಾಬ್ದಾರಿ ಹೊರಲು ಮುಂದೆ ಬರುತ್ತಿಲ್ಲ. ಯಾರಿಗೆ ತಾನೆ ಲಾಭದಾಯಕ ಇಲಾಖೆ ಬೇಡ ಹೇಳಿ ಎಂದ ಅವರು, ಸಾರಿಗೆ ಇಲಾಖೆ ನಷ್ಟದಲ್ಲಿದೆ. ನಾವು ಮನಸ್ಸು ಮಾಡಿ ಲಾಭದತ್ತ ತೆಗೆದುಕೊಂಡು ಹೋಗೋಣ. ಅದಕ್ಕೆ ಗದಗ ಒಂದೇ ಘಟಕದಲ್ಲಿ ಲಾಭ ಬಂದರೆ ಸಾಲದು ರಾಜ್ಯದ ನಾಲ್ಕೂ ನಿಗಮಗಳು ಲಾಭದತ್ತ ಹೊರಳಬೇಕಿದೆ ಹೀಗಾಗಿ ನೌಕರರ ಪರಿಶ್ರಮವೂ ಬೇಕಿದೆ ಎಂದರು.
ಇವತ್ತು ಶ್ರೀರಾಮುಲು ಎಂದರೆ ಪ್ರೀತಿ ಅಭಿಮಾನದಿಂದ ನೋಡುತ್ತೀರಿ. ಏಕೆಂದರೆ ಹಿಂದೆ ನಾನು ಮಾಡಿರುವ ಕೆಲಸಗಳು ನಿಮ್ಮ ಮನಸ್ಸಿನಲ್ಲಿ ಉಳಿದಿರುವುದು. ಹೀಗಾಗಿ ನಾನು ಒಳ್ಳೆಯ ಕೆಲಸ ಮಾಡಿದ್ದೇನೆ ಎಂದು ಕೊಂಡಿದ್ದೇನೆ. ಈಗ ನಮಗೆ ಕಷ್ಟದ ಸಂದರ್ಭದಲ್ಲಿ ಬಂದ್ರು, ನಮಗೆ ಒಳ್ಳೆಯದು ಮಾಡುತ್ತಾರೆ ಎಂಬ ವಿಶ್ವಾಸ ನಿಮಗೆ ಆ ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಸೆ.3ಕ್ಕೆ ರಾಜ್ಯ ಸಾರಿಗೆ ಇಲಾಖೆಗೆ 60 ವರ್ಷ: ಸೆ.3ಕ್ಕೆ ರಾಜ್ಯ ಸಾರಿಗೆ ಇಲಾಖೆಗೆ 60 ವರ್ಷ ತುಂಬುತ್ತಿದ್ದು, ನಾವು ಒಂದು ಕಾರ್ಯಕ್ರಮವನ್ನು ಮಾಡಬೇಕಿದೆ. ಆ ನಿಟ್ಟಿನಲ್ಲಿ ಸಿಎಂ ಜತೆ ಮಾತನಾಡುತ್ತೇನೆ ಎಂದರು.
ಇನ್ನು ಎರಡು ತಿಂಗಳ ಸಂಬಳವನ್ನು ಸಿಎಂ ಈಗಾಗಲೇ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ವೇತನ ವಿಳಂಬವಾಗದಂತೆ ನೋಡಿಕೊಳ್ಳುತ್ತೇನೆ. ಜತೆಗೆ ಯಾರಯಾರ ಮೇಲೆ ಕೇಸ್‌ಗಳಾಗಿವೆಯೋ ಅವುಗಳನ್ನು ಕಾನೂನಾತ್ಮಕವಾಗಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಇನ್ನು ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳು ಸೇರಿ ನಿಮ್ಮ ಎಲ್ಲರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿ ನಂದಾಗಿದೆ. ಆದರೆ ನೀವು ಸರ್ಕಾರಕ್ಕೆ ಮುಜುಗರವಾಗದಂತೆ, ಇಕ್ಕಟ್ಟಿಗೆ ಸಿಲುಕಿಸದಂತೆ ನೋಡಿಕೊಳ್ಳಬೇಕು ಎಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ.
ನಿಮ್ಮ ಮನುಷ್ಯ ಶ್ರೀರಾಮುಲು ಸರ್ಕಾರದಲ್ಲಿ ಸಾರಿಗೆ ಮಂತ್ರಿಯಾಗಿ ಇರುವ ಕಾರಣ ನಿಮ್ಮ ಬೇಡಿಕೆಗಳನ್ನು ಈಡೇರಿಸುವಂತಹ ಕೆಲಸವನ್ನು ನಾನು ಮಾಡುತ್ತೇನೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಬಗೆಹರಿಸುತ್ತೇನೆ . ಯಾವಾಗಲು ನಾನು ನಿಮ್ಮ ಜತೆಯಲ್ಲಿ ಇರುತ್ತೇನೆ ಎಂದು ತಿಳಿಸಿದರು.
ಬಸ್‌ಗಳ ಸ್ಥಿತಿಗತಿ ನೋಡಿ ಹಳೆ ಬಸ್ ಕೂಡ ತೆಗೆಯಬೇಕಿದೆ. ಕೊರೊನಾ ಸಂಕಷ್ಟದಲ್ಲಿ ಜನರು ಇದ್ದಾರೆ. ಹೀಗಾಗಿ ಕಿಲೋ ಮೀಟರ್‌ಗೆ ನಮಗೆ ನಷ್ಟವಾಗುತ್ತಿದೆ. ಆದರೂ ಈ ನಡುವೆ ನಾವು ಯಶಸ್ಸು ಸಾಧಿಸಬೇಕಿದೆ ಎಂದು ಹೇಳಿದರು.
ಇನ್ನು ಗದಗದಿಂದಲೇ ನಾನು ಆರಂಭ ಮಾಡುತ್ತೇನೆ. ನೌಕರರಿಗೆ ಡಿಪೋ ಮಟ್ಟದಲ್ಲಿ ಆಗುತ್ತಿರುವ ಕಿರುಕುಳಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನಾನು ಪ್ರತಿ ಡಿಪೋ ವ್ಯವಸ್ಥಾಪಕರು ಮತ್ತು ಅಧಿಕಾರಿಗಳ ಜತೆ ಮಾತನಾಡಿ ನಿಮಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ.
ಜತೆಗೆ ಎಲ್ಲಿ ನಷ್ಟವಾಗುತ್ತಿದೆ ಅದನ್ನು ಹೇಗೆ ಸರಿಪಡಿಸಬೇಕು ಎಂಬುದರ ಬಗ್ಗೆಯೂ ಎಲ್ಲ ಡಿಪೋ ವ್ಯವಸ್ಥಾಪಕರು ಮತ್ತು ಅಧಿಕಾರಿಗಳ ಜತೆ ಮಾತನಾಡುತ್ತೇನೆ, ಬಸ್ ನಿಲ್ದಾಣಗಳಿಗೂ ಭೇಟಿ ನೀಡಿ ಎಲ್ಲವನ್ನು ಪರಿಶೀಲಿಸುತ್ತೇನೆ ಎಂದರು.
ಈ ನಡುವೆ ನೀವು ನಿಮ್ಮ ಕೆಲಸವೊಂದೆ ಮಾಡಿ ಏನು ನೀವು ಎಷ್ಟು ದುಡಿಯುತ್ತೀರೋ ಅಷ್ಟು ಕೂಲಿ ಕೊಡಿಸುವ ಜವಾಬ್ದಾರಿ ನಮಗೆ ಬಿಡಿ. ನೀವು ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.