ಬೆಂಗಳೂರು: ರಾಜ್ಯದಲ್ಲಿ 9 ರಿಂದ 12 ನೇ ತರಗತಿವರೆಗೆ ಶಾಲೆ ಆರಂಭಿಸಲಾಗಿದೆ. ಆದರೆ, ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆಯಲಾಗಿಲ್ಲ. ಹೀಗಾಗಿ ಪಾಸಿಟಿವಿಸಿ ದರ ಶೇ. 2 ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ 6,7,8 ನೇ ತರಗತಿಗಳನ್ನು ಸೆಪ್ಟೆಂಬರ್ 6ರಿಂದ ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹಿರಿಯ ಸಚಿವರ ಮತ್ತು ಅಧಿಕಾರಿಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ಅನೇಕ ಪ್ರಮುಖ ಅಂಶಗಳ ಕುರಿತು ಚರ್ಚೆ ನಡೆಸಲಾಗಿದ್ದು ಅವುಗಳ ಬಗ್ಗೆ ಸುದ್ದಿಗಾರರಿಗೆ ಅಶೋಕ್ ವಿವರಿಸಿದ್ದಾರೆ.
ದಿನ ಬಿಟ್ಟು ದಿನ ಮಾತ್ರ ತರಗತಿಗಳು ನಡೆಯಲಿದ್ದು, ಶೇ. 50 ರಷ್ಟು ಹಾಜರಾತಿಗೆ ಮಾತ್ರ ಅವಕಾಶ ನೀಡಲಾಗಿದೆ. ವಾರದಲ್ಲಿ 5ದಿನ ಮಾತ್ರ ತರಗತಿಗಳು ನಡೆಯಲಿದ್ದು, ವಾರದಲ್ಲಿ 2 ದಿನ ಶುಚಿಗೊಳಿಸಲು ಅವಕಾಶ ನೀಡಲಾಗಿದೆ. ಪ್ರತಿ ದಿನ ತರಗತಿ ನಡೆಯುತ್ತದೆ. ಮೊದಲ ದಿನ ಶೇ. 50 ಮತ್ತು ಮರುದಿನ ಶೇ.50ರಷ್ಟು ಹಾಜರಾತಿ ಇರಲಿದೆ. ಶನಿವಾರ ಮತ್ತು ಭಾನುವಾರ ಸ್ಯಾನಿಟೈಸ್ ಮಾಡಲು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಶಾಲೆಗಳನ್ನು ಪುನಃ ತೆರೆಯಲು ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ. 6472 ಮಕ್ಕಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು 14 ವಿದ್ಯಾರ್ಥಿಗಳಿಗೆ ಮಾತ್ರ ಪಾಸಿಟಿವ್ ಬಂದಿದೆ. ಹೀಗಾಗಿ ಶಾಲೆಗಳನ್ನು ತೆರೆಯುವುದರಿಂದ ಮಕ್ಕಳ ಆರೋಗ್ಯದ ವಿಚಾರದಲ್ಲಿ ಯಾವುದೇ ಆತಂಕ ಇಲ್ಲ. ಅಲ್ಲದೆ, ಶಿಕ್ಷಕರಿಗೂ ಲಸಿಕೆ ಹಾಕಿಸಲಾಗಿದೆ. 2.61 ಲಕ್ಷ ಶಿಕ್ಷಕರ ಪೈಕಿ 1.10 ಲಕ್ಷ ಶಿಕ್ಷಕರಿಗೆ ಎರಡು ಡೊಸ್ ಲಸಿಕೆ ನೀಡಲಾಗಿದೆ ಎಂದರು.
ಮೂರನೇ ಅಲೆಯ ನಡುವೆ ಹಬ್ಬ ಆಚರಣೆ: ಸಚಿವರ ಎಚ್ಚರಿಕೆ !: ಇನ್ನೂ ಕೊರೊನಾ ಮೂರನೇ ಅಲೆಯ ನಡುವೆ ಜನರಿಗೆ ಎಚ್ಚರಿಕೆ ನೀಡಿರುವ ಸಚಿವ ಅಶೋಕ್, ಓಣಂ ಹಬ್ಬದಿಂದಾಗಿ ಕೇರಳದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಹೀಗಾಗಿ ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಒಂದು ವಾರ ಕಡ್ಡಾಯ ಕ್ವಾರಂಟೈನ್ಗೆ ಆದೇಶ ಹೊರಡಿಸಲಾಗಿದೆ. ಕೋವಿಡ್ ಟೆಸ್ಟ್ ಕೂಡ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಮೂರನೇ ಅಲೆಯ ಆತಂಕದ ನಡುವೆ ಕರ್ನಾಟಕದಲ್ಲೂ ಹಬ್ಬದ ಆಚರಣೆಯಲ್ಲಿ ಎಚ್ಚರಿಕೆ ನಡೆಯನ್ನು ಇಡಬೇಕಾಗಿದೆ. ಚಿತ್ರದುರ್ಗ, ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ದೊಡ್ಡಮಟ್ಟದಲ್ಲಿ ಗಣೇಶ ಹಬ್ಬ ಆಚರಿಸಲಾಗುತ್ತದೆ. 30 ಕಡೆ ಅತೀ ಹೆಚ್ಚಿನ ಜನ ಸೇರುತ್ತಾರೆ. ಈ ವೇಳೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ಸಂಘಟಕರ ಜೊತೆ ಒಂದು ಸುತ್ತಿನ ಮಾತುಕತೆ ಮಾಡಲಾಗುವುದು ಎಂದು ಹೇಳಿದರು.
ಪೊಲೀಸರ ಬಳಿ ಎಲ್ಲ ಸಂಘಟಕರ ಮಾಹಿತಿ ಇದೆ. ಸೆ.5ರಂದು ಸಿಎಂ ಮತ್ತೊಂದು ಸಭೆ ನಡೆಸುತ್ತಾರೆ. ಅನೇಕರು ಹಬ್ಬದ ಆಚರಣೆಗೆ ಅವಕಾಶ ನೀಡಲು ಮನವಿ ಮಾಡಿದ್ದರು. ಕೋವಿಡ್ ಹೆಚ್ಚಾಗದಂತೆ ಎಚ್ಚರಿಕೆ ವಹಿಸಿ ಅನುಮತಿ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ಗಣೇಶ ಚತುರ್ಥಿ ಆಚರಣೆಗೆ ಷರತ್ತು ಬದ್ಧ ಅನುಮತಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕೇರಳದಲ್ಲಿ ಕೊರೊನಾ ಹೆಚ್ಚಾಗಿದ್ದರಿಂದ ಗಡಿ ಜಿಲ್ಲೆ ಮಂಗಳೂರು, ಕೊಡಗು ಜಿಲ್ಲೆಯಲ್ಲಿ ನಿರ್ಬಂಧ ಮುಂದುವರಿಕೆಯಾಗಲಿದೆ. ಮದುವೆ ಸಮಾರಂಭಕ್ಕೆ ಷರತ್ತು ಬದ್ಧ ಕಲ್ಯಾಣ ಮಂಟಪ ಶೇ.50 ರಷ್ಟು ಸಾಮರ್ಥ್ಯದೊಂದಿಗೆ ಅನುಮತಿ ನೀಡಲಾಗಿದೆ. ಆದರೆ ಮದುವೆಗೆ 400ಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ತಿಳಿಸಿದರು.