ಹೈದರಾಬಾದ್ : ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ತೆಲಂಗಾಣದಲ್ಲಿ ಪ್ರವಾಹಕ್ಕೆ ಸಿಲುಕಿ ನವವಧು ಸೇರಿ ಏಳು ಮಂದಿ ಕೊಚ್ಚಿಹೋದ ಘಟನೆ ನಡೆದಿದೆ.
ವಿಕಾರಾಬಾದಿನಲ್ಲಿ ನವವಿವಾಹಿತರಾದ ಪ್ರವಳಿಕಾ ಹಾಗೂ ನವಾಜ್ ರೆಡ್ಡಿ ಅವರು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಕುಟುಂಬದ ಸದಸ್ಯರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ನವ ವಧು, ಆಕೆಯ ನಾದಿನಿ ಶ್ವೇತಾ ಹಾಗೂ ಆಕೆಯ ಮಗ ತ್ರಿನಾಥ ರೆಡ್ಡಿ (8) ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ, ಘಟನೆಯಲ್ಲಿ ತ್ರಿನಾಥ ರೆಡ್ಡಿ ದೇಹ ಇನ್ನೂ ಪತ್ತೆಯಾಗಿಲ್ಲ.
ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ವಾರಂಗಲ್‌ನ ಚರಂಡಿಯಲ್ಲಿ ಓರ್ವನ ಶವ ತೇಲುತ್ತಿರುವುದು ಪತ್ತೆಯಾಗಿದ್ದು. ಜತೆಗೆ ಅವರ ಬಳಿ ಇದ್ದ ಲ್ಯಾಪ್ ಟಾಪ್ ಪರಿಶೀಲಿಸಿದಾಗ ಆತ ಶಿವನಗರದ ವೊರೊಮ್ ಕ್ರಾಂತಿ ಕುಮಾರ್ ಆತ ಓರ್ವ ಸಾಫ್ಟ್ ವೇರ್ ಇಂಜಿನಿಯರ್ ಎಂದು ತಿಳಿದುಬಂದಿದೆ.
ಅಲ್ಲದೆ ಶಂಕರಪಲ್ಲಿಯಲ್ಲಿ ಕಾರಿನಲ್ಲಿದ್ದ 70 ವರ್ಷದ ವೃದ್ಧ, ಆದಿಲಾಬಾರ್‌ನಲ್ಲಿ 30 ವರ್ಷದ ಕಾರ್ಮಿಕ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ವರದಿಯಾಗಿದೆ.
ಸಿರ್ಸಿಲ್ಲಾ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡ ರಾಜ್ಯ ಸಾರಿಗೆ ಬಸ್‌ನಲ್ಲಿದ್ದ 12 ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ನೈಋತ್ಯ ಮುಂಗಾರು ಚುರುಕಾಗಿರುವುದರಿಂದ ವಿಕಾರಾಬಾದ್, ರಂಗ ರೆಡ್ಡಿ ಮತ್ತು ಸಿದ್ದಿಪೇಟೆಯಲ್ಲಿ ಭಾರೀ ಮಳೆಯಾಗಿದೆ.
ಹೈದರಾಬಾದ್, ಆದಿಲಾಬಾದ್, ನಿಜಾಮಾಬಾದ್, ಕರೀಂನಗರ, ವಾರಂಗಲ್ ಮತ್ತು ಖಮ್ಮಂ ನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.