ವಿಜಯಪುರ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಹುದ್ದೆಗೆ ನಿಯಮ 17/1 ರಡಿಯಲ್ಲಿ ಈ ಹಿಂದೆ ಡಿಸಿ ಆಗಿದ್ದ ನಾರಾಯಣಪ್ಪ ಕುರುಬರ ಅವರನ್ನು ಹುದ್ದೆ ಮತ್ತು ವೇತನ ಶ್ರೇಣಿ ಯೊಂದಿಗೆ ನಿನ್ನೆ (ಸೋಮವಾರ) ಪ್ರತಿನಿಯೋಜಿಸಲಾಗಿತ್ತು. ಮತ್ತೆ ಇಂದು (ಆ.31) ಅವರ ಹುದ್ದೆಯನ್ನು ಬದಲಾವಣೆ ಮಾಡಿ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ನಾರಾಯಣಪ್ಪ ಕುರುಬರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ನೌಕರರಿಂದ ಲಂಚ ಪಡೆದ ಆರೋಪ ಹೊತ್ತಿರುವ ಅಧಿಕಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಆಗಸ್ಟ್ 21ರಂದು ತರಾತುರಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರದ ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿತ್ತು.
ಆದರೆ ಅಂತಹ ಲಂಚಕೋರ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಆ ಅಧಿಕಾರಿಯನ್ನು ಇಂದು (ಆ.30) ಸಾರಿಗೆಯ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ವಿಜಯಪಥದಲ್ಲಿ ನಿನ್ನೆ ವರದಿ ಪ್ರಕಟವಾಗಿತ್ತು.
ಯಾವುದೇ ತಪ್ಪು ಮಾಡದ ಸಾವಿರಾರು ಸಾರಿಗೆ ನೌಕರರನ್ನು ವಿಚಾರಣೆಗೂ ಒಳಪಡಿಸದೆ ಏಕಾಏಕಿ ವಜಾ, ವರ್ಗಾವಣೆ ಮತ್ತು ಅಮಾನತಿನ ಶಿಕ್ಷೆ ನೀಡಿದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಇಂದು ಲಂಚಾರೋಪ ಇರುವ ಅಧಿಕಾರಿಯನ್ನು ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿರುವುದು ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾಣುತ್ತಿದೆ ಎಂಬ ವರದಿ ಪ್ರಕಟವಾಗಿತ್ತು.
ಈ ಎಲ್ಲವನ್ನು ಗಮನಿಸಿ ಸಕ್ಷಮ ಪ್ರಾಧಿಕಾರಿಗಳ ಆದೇಶದನ್ವಯ ನಿನ್ನೆ ನಾರಾಯಣಪ್ಪ ಕುರುಬರ ಅವರನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಹುದ್ದೆಗೆ ನೇಮಿಸಿದ್ದನ್ನು ಮಾರ್ಪಡಿಸಿ ಇಂದು (ಆ.31) ಆಡಳಿತಾತ್ಮಕ ಕಾರಣಗಳ ಮೇಲೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿಯ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ನೇಮಕ ಮಾಡಿರುವುದಾಗಿ ಆದೇಶ ಹೊರಡಿಸಿದೆ.
ನಾರಾಯಣಪ್ಪ ಕುರುಬರ ಅವರ ನಿಯೋಜನೆಯು ಆಡಳಿತಾತ್ಮಕ ಕಾರಣಗಳ ಮೇರೆಗೆ ಮಾಡಲಾಗಿದ್ದು, ಕಾರ್ಯಸ್ಥಾನದಲ್ಲಿ ಬದಲಾವಣೆ ಇರುವುದರಿಂದ ನಿಯಮಾನುಸಾರ ವರ್ಗಾವಣೆ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ನಿಯೋಜನೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳತಕ್ಕದ್ದು ಎಂದು ಆಗಸ್ಟ್ 31 ರಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.