ನ್ಯೂಡೆಲ್ಲಿ: ಚುನಾವಣೆಗಳ ಗೆಲುವಿನ ರೂವಾರಿ ಎಂದೆ ಹೆಸರು ಮಾಡಿರುವ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಅಧ್ಯಕ್ಷೆ ಸೋನಿಯಾಗಾಂಧಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈ ಕುರಿತು ಕಾಂಗ್ರೆಸ್‌ನ ಹಲವು ಹಿರಿಯ ನಾಯಕರೊಂದಿಗೆ ಸೋನಿಯಾಗಾಂಧಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಕೆಲವು ನಾಯಕರು ಸ್ವರವನ್ನು ಇನ್ನು ಕೆಲ ನಾಯಕರು ಅಪಸ್ವರವನ್ನು ಎತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇನೆ ಇರಲಿ ಪಕ್ಷದ ಹಿತದೃಷ್ಟಿಯಿಂದ ಇನ್ನು ಕೆಲವರು ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.
ಈ ಎಲ್ಲದರ ನಡುವೆ ಅಂತಿಮ ನಿರ್ಧಾರವು ಪಕ್ಷದ ವರಿಷ್ಠೆ ಸೋನಿಯಾಗಾಂಧಿ ಅವರು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ನಡುವೆ ಕಳೆದ ವರ್ಷ ಪಕ್ಷದಲ್ಲಿ ಬದಲಾವಣೆ ಬಯಸಿದ್ದ 23 ನಾಯಕರ ಗುಂಪು, ಪ್ರಶಾಂತ್ ಕಿಶೋರ್ ಕಾಂಗ್ರೆಸ್‌ಗೆ ಸೇರ್ಪಡೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎರಡು ಚುನಾವಣೆ ಸೋಲಿನ ನಂತರ, ಕಾಂಗ್ರೆಸ್ ಸಲಹೆಗಾರರನ್ನು ಹುಡುಕುತ್ತಿದೆ. ಅನುಭವಿ ನಾಯಕ ಅಹ್ಮದ್ ಪಟೇಲ್ ಅವರ ನಿಧನದೊಂದಿಗೆ, ಕಾಂಗ್ರೆಸ್ ಈಗಾಗಲೇ ಒಬ್ಬ ಚುನಾವಣಾ ತಂತ್ರಗಾರನನ್ನು ಕಳೆದುಕೊಂಡಿದೆ.
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಸೇರಿದಂತೆ ಹಲವು ವಿಧಾನಸಭಾ ಚುನಾವಣೆಗಳಿಗೆ ಮುನ್ನ ಪಕ್ಷದ ಪುನರುಜ್ಜೀವನ ಕುರಿತು ಚರ್ಚಿಸಲು ಕಿಶೋರ್ ಕೆಲವು ಬಾರಿ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಮಾಜಿ ಅಧ್ಯಕ್ಷರನ್ನು ಗೌಪ್ಯವಾಗಿ ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಈ ಕುರಿತು ಕಾಂಗ್ರೆಸ್ ನಾಯಕರೊಂದಿಗೆ ಅನೌಪಚಾರಿಕವಾಗಿ ಚರ್ಚಿಸಿದ್ದಾರೆ ಮತ್ತು ಕಿಶೋರ್ ಅವರನ್ನು ಪಕ್ಷಕ್ಕೆ ಕರೆ ತರುವ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದ್ದಾರೆ ಮತ್ತು ಪಕ್ಷದ ಚುನಾವಣಾ ಕಾರ್ಯತಂತ್ರದ ಹೊಣೆಗಾರಿಕೆಯನ್ನು ಅವರಿಗೆ ಯಾವ ಮಟ್ಟಿಗೆ ನೀಡಬಹುದು ಎಂದು ಪಕ್ಷದ ನಾಯಕರು ಹೇಳಿದರು.
ಕಿಶೋರ್ ಅವರು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ ನಾಯಕತ್ವ ಮತ್ತು ಕೆಲ ಯೋಜನೆ ರೂಪಿಸುವ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ಕಿಶೋರ್ ಶೀಘ್ರದಲ್ಲೇ ರಾಜಕೀಯಕ್ಕೆ ಧುಮುಕುವ ಸಾಧ್ಯತೆಯಿದೆ. ಕಿಶೋರ್ ಅವರನ್ನು ಚುನಾವಣಾ ನಿರ್ವಹಣೆಯ ಉಸ್ತುವಾರಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಬಹುದು ಎಂದು ಮೂಲಗಳು ತಿಳಿಸಿವೆ. ಆದರೆ ಪಕ್ಷದ ಕೆಲ ಹಿರಿಯರು ಕಿಶೋರ್ ಅವರನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲದ ಕಾರಣ ಒಬ್ಬ ವ್ಯಕ್ತಿಗೆ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ನೀಡುವುದು ಒಳ್ಳೆಯದಲ್ಲ ಎಂದು ಒತ್ತಾಯಿಸುತ್ತಾರೆ. ಆದಾಗ್ಯೂ, ಪಕ್ಷದಲ್ಲಿ ಅವರ ಸೇರ್ಪಡೆಗೆ ಯಾರೂ ವಿರೋಧಿಸುತ್ತಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗೆ ತಯಾರಿ ನಡೆಸುತ್ತಿದೆ. ಕಿಶೋರ್ ಇತ್ತೀಚೆಗೆ ತೃಣಮೂಲ ಕಾಂಗ್ರೆಸ್, ಡಿಎಂಕೆ ಪಕ್ಷದ ಪ್ರಚಾರಗಳನ್ನು ನಿರ್ವಹಿಸಿದ್ದಾರೆ ಮತ್ತು ಪಕ್ಷದ ವ್ಯಾಪ್ತಿಯಲ್ಲಿ ಉತ್ತಮ ಸಂಬಂಧ ಹೊಂದಿದ್ದಾರೆ.
ಕಳೆದ ಉತ್ತರ ಪ್ರದೇಶದಲ್ಲಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಜತೆ ಕೆಲಸ ಮಾಡಿರುವ ಪ್ರಶಾಂತ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪ್ರಧಾನ ಸಲಹೆ ಗಾರರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಇತ್ತೀಚೆಗಷ್ಟೇ ಅವರು ರಾಜೀನಾಮೆ ನೀಡಿದ್ದರು.
ಈ ನಡುವೆ ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರನ್ನು ಭೇಟಿಮಾಡಿದ್ದ ಪ್ರಶಾಂತ್ ಕಿಶೋರ್, ಚುನಾವಣಾ ನಿರ್ವಹಣೆಯ ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳುವ ಕುರಿತಾಗಿ ಚರ್ಚೆ ನಡೆಸಿದ್ದರು. 2014ರಲೋಕಸಭಾ ಚುನಾಣೆಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾ ಣಿ ಹಿಡಿಯುವಲ್ಲಿ ನೆರವಾಗಿದ್ದ ಪ್ರಶಾಂತ್ ಕಿಶೋರ್, ಬಳಿಕ ಜೆಡಿಯು ಪಕ್ಷವನ್ನು ಸೇರಿದ್ದರು.