ಬೆಂಗಳೂರು: ಕೋವಿಡ್ ಲಸಿಕೆ ಇರುವುದು ಮನುಕುಲದ ಉಳಿವಿಗಾಗಿ. ಹೀಗಾಗಿ ಲಸಿಕೆ ಹಾಕಿಸಿಕೊಂಡು ಶಾಲಾ ಮಕ್ಕಳು ತರಗತಿಗೆ ಹಾಜರಾಗಿ ಎಂದು ರಾಜ್ಯ ಹೈ ಕೋರ್ಟ್‌ನ ಹಂಗಾಮಿ ಮುಖ್ಯನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಸಲಹೆ ನೀಡಿದ್ದಾರೆ.
ಆಯುರ್ವೇದ ಕಾಲೇಜಿನಲ್ಲಿ ಲಸಿಕೆ ಕಡ್ಡಾಯ ಪ್ರಶ್ನಿಸಿ ಡಾ. ಶ್ರೀನಿವಾಸ ಕಕ್ಕಿಲಾಯ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದು, ಆ ಅರ್ಜಿಯನ್ನು ಇಂದು ಕೈಗೆತ್ತಿಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸ್ವತಃ ವೈದ್ಯರಾದವರೇ ಇಂತಹ ಪಿಐಎಲ್ ಹಾಕಿರುವುದು ಆಘಾತಕಾರಿ. ಪೋಲಿಯೋ ಲಸಿಕೆಗೂ ಹೀಗೆಯೇ ವಿರೋಧ ಮಾಡಲಾಗಿತ್ತು. ಆದರೆ ವಿರೋಧ ಮಾಡಿದ ದೇಶಗಳಲ್ಲೇ ಪೋಲಿಯೋ ಇನ್ನೂ ಉಳಿದುಕೊಂಡಿದೆ ಎಂದು ಹೇಳಿದರು.
ಇನ್ನು ಲಸಿಕೆ ಇರುವುದು ಮನುಕುಲದ ಉಳಿವಿಗಾಗಿ ಎಂದು ಅಭಿಪ್ರಾಯಪಟ್ಟ ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ಅವರು ಶಾಲಾ ಮಕ್ಕಳು ಲಸಿಕೆ ಹಾಕಿಸಿಕೊಂಡು ತರಗತಿಗೆ ಹಾಜರಾಗಬೇಕು ಎಂದು ಸಲಹೆ ನೀಡಿ ಬಳಿಕ ಈ ಪ್ರಕರಣದ ವಿಚಾರಣೆಯನ್ನು ಕೋವಿಡ್ಗಾಗಿ ಇರುವ ಪ್ರತ್ಯೇಕ ಪೀಠಕ್ಕೆ ವರ್ಗಾವಣೆ ಮಾಡಿದರು.