ನ್ಯೂಡೆಲ್ಲಿ: ಕೆಲವು ಚಾನೆಲ್‌ಗಳು ತಾವು ಬಿತ್ತರಿಸುವ ಸುದ್ದಿಗಳಿಗೂ ಕೋಮುಬಣ್ಣ ಬಳಿಯುತ್ತಿವೆ. ಜತೆಗೆ ಸಾಮಾಜಿಕ ಮಾಧ್ಯಮಗಳು ಹಾಗೂ ಕೆಲ ವೆಬ್ ಪೋರ್ಟಲ್‌ಗಳಲ್ಲಿ ಸುಳ್ಳು ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂಥ ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಜಮಿಯಾತ್ ಉಲೇಮಾ–ಐ–ಹಿಂದ್ ಸಂಘಟನೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಎ.ಎಸ್.ಬೋಪಣ್ಣ ಅವರಿದ್ದ ತ್ರಿಸದಸ್ಯ ನ್ಯಾಯಪೀಠವೂ ಈ ಅಭಿಪ್ರಾಯ ವ್ಯಕ್ತಪಡಿಸಿತು.
ದೆಹಲಿಯ ಮರ್ಕಜ್ ನಿಜಾಮುದ್ದೀ ನ್ನಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಪ್ರಸಾರಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಸುಳ್ಳು ಸುದ್ದಿಗಳನ್ನು ಹರಡಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆ ಮನವಿಮಾಡಿತ್ತು.
ಕೆಲವು ಖಾಸಗಿ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳಿಗೆ ಕೋಮುಬಣ್ಣ ಬಳಿಯಲಾಗುತ್ತದೆ. ಅಂತಿಮವಾಗಿ ಇದರಿಂದ ದೇಶಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕಳವಳ ವ್ಯ ಕ್ತಪಡಿಸಿದ ನ್ಯಾಯಪೀಠ, ಖಾಸಗಿ ಸುದ್ದಿವಾಹಿನಿಗಳ ನಿಯಂತ್ರ ಣಕ್ಕೆ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.
ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಧೀಶರು, ಸಂಸ್ಥೆಗಳ ವಿರುದ್ಧವೂ ಬರೆಯಲಾಗುತ್ತಿದೆ. ಇಂಥ ಕೃತ್ಯಗಳಿಗೆ ಉತ್ತರದಾಯಿತ್ವವೇ ಇರುವುದಿಲ್ಲ. ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಸುಳ್ಳು ಸುದ್ದಿಗಳ ಮೇಲೆ ನಿಯಂತ್ರ ಣವೇ ಇಲ್ಲ . ಯಾರು ಬೇಕಾದರೂ ಯೂಟ್ಯೂಬ್ ಚಾನೆಲ್ ಆರಂಭಿಸಬಹುದಾಗಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಸಾಮಾಜಿಕ ಮಾಧ್ಯ ಮಗಳು, ವೆಬ್ ಪೋರ್ಟಲ್‌ಗಳು ಸೇರಿದಂತೆ ಆನ್ಲೈನ್ ವೇದಿಕೆಗಳ ಮೂಲಕ ಪ್ರಸಾರವಾಗುವ ಮಾಹಿತಿ ನಿಯಂತ್ರಣಕ್ಕೆ ರೂಪಿಸಿರುವ ನೂತನ ಐಟಿ ಕಾಯ್ದೆಗೆ ಸಂಬಂಧಿಸಿ ವಿವಿಧ ಹೈ ಕೋರ್ಟ್‌ಗಳಲ್ಲಿ ಅರ್ಜಿಗಳನ್ನು ಸಲ್ಲಿ ಸಲಾಗಿದೆ. ಈ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರ ಮನವಿಮಾಡಿತು.
ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಆರು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಹೇಳಿತು.