ಕಲಬುರ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಸೆಪ್ಟೆಂಬರ್ 3 ರಂದು ಬೆಳಗ್ಗೆ 7 ಗಂಟೆಯಿಂದ 6 ಗಂಟೆಯವರೆಗೆ ನಡೆಯಲ್ಲಿದ್ದು, ಸಾರ್ವಜನಿಕರು ಸಕ್ರಿಯವಾಗಿ ಚುನಾವಣೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಮನವಿ ಮಾಡಿದ್ದಾರೆ.
ಚುನಾವಣೆಯು ಶಾಂತಿಯುತ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಬೇಕಾಗಿರುವ ಎಲ್ಲಾ ಪೂರ್ವ ಸಿದ್ದತೆಗಳು ಈಗಾಗಲೇ ಜಿಲ್ಲಾಡಳಿತ ಕೈಗೊಂಡಿದೆ. ನಗರದ 55 ವಾರ್ಡ್ಗಳ 533 ಮತಗಟ್ಟೆಯಲ್ಲಿ ಚುನಾವಣೆ ನಡೆಯಲಿದ್ದು, ಪುರುಷರು 2,58,775, ಮಹಿಳೆಯರು 2,60,543, ಇತರೆ 146 ಸೇರಿದಂತೆ ಒಟ್ಟು 5,19,464 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟು 360 ಜನ ನಾಮಪತ್ರ ಸಲ್ಲಿಕೆಯಾಗಿದ್ದವು. ಅದರಲ್ಲಿ 19 ತಿರಸ್ಕೃತವಾಗಿದ್ದು, 20 ಮಂದಿ ಹಿಂಪಡೆದಿರುತ್ತಾರೆ. ಒಟ್ಟಾರೆ 300 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ಅಂಕಿ-ಅಂಶ ನೀಡಿದ್ದಾರೆ.
533 ವಾರ್ಡ್ಗಳಲ್ಲಿ ಹಿಂದಿನ ಚುನಾವಣೆಯಲ್ಲಿ ಅಗಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು 54 ಅತೀ ಸೂಕ್ಷ್ಮ, 150 ಸೂಕ್ಷ್ಮ ಹಾಗೂ 329 ಸಾಮಾನ್ಯ ಮತಗಟ್ಟೆಗಳೆಂದು ಎಂದು ಗುರುತಿಸಲಾಗಿದೆ.
ಸಮಸ್ಯೆಗಳಿರುವ ವಾರ್ಡ್ಗಳಲ್ಲಿ ಹೆಚ್ಚಿನ ಗಮನ ವಹಿಸಲಾಗಿದೆ. 533 ವಾರ್ಡ್ಗಳ ಮತದಾನ ಕೇಂದ್ರಗಲ್ಲಿ ಒಟ್ಟು 1066 ಮತಯಂತ್ರ (ಇವಿಎಂ) ಗಳನ್ನು ಬಳಕೆ ಮಾಡುತ್ತಿದ್ದು, ಶೇಕಡ 20ರಷ್ಟು ಇವಿಎಂಗಳನ್ನು ಮೀಸಲಿರಿಸಲಾಗಿದೆ.
645 ಪಿಆರ್ಓಗಳು, 645 ಎಪಿಆರ್ಓ ಗಳು ಸೇರಿ ಒಟ್ಟು 2570 ಸಿಬ್ಬಂದಿಗಳನ್ನು ಚುನಾವಣೆಗಾಗಿ ನಿಯೋಜಿಸಲಾಗಿದೆ. ಇದರಲ್ಲಿ ಹೆಚ್ಚುವರಿಯಾಗಿ ಶೇಕಡ 20 ರಷ್ಟು ಸಿಬ್ಬಂದಿಯನ್ನು ಮೀಸಲಿರಿಸಲಾಗಿದೆ.
ಒಟ್ಟು 36 ಪೊಲೀಸ್ ಸೆಕ್ಟರ್ಗಳಿದ್ದು, ಇಬ್ಬರು ಡಿಸಿಪಿ, 6 ಎಸಿಪಿ, 17 ಪಿಐ, 15 ಪಿಎಸ್ಐ, 62 ಎಎಸ್ಐ, 75 ಹೆಡ್ ಕಾನ್ಸ್ಸ್ಟೇಬಲ್, 494 ಪೊಲೀಸ್ ಕಾನ್ಸ್ಟೇಬಲ್, 482 ಹೋಂ ಗಾರ್ಡ್ಗಳನ್ನು ನಿಯೋಜಿಸಲಾಗಿದ್ದು, 500 ಜನ ಪೊಲೀಸ್ ಕಾನ್ಸ್ಸ್ಟೇಬಲ್ಸ್ ಹಾಗೂ 200 ಜನ ಹೋಮ್ಗಾಡ್ಸ್ಗಳನ್ನು ಹೊರ ಜಿಲ್ಲೆಗಳಿಂದ ಕರೆಸಲಾಗಿದೆ. ಒಟ್ಟಾರೆ 1118 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು, ಪರಿಸ್ಥಿತಿಗನುಗುಣವಾಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.