ಹಾವೇರಿ: ಒಂದನೇ ತರಗತಿಯಿಂದ ಪೂರ್ಣ ಪ್ರಮಾಣದ ಶಾಲೆಗಳ ಆರಂಭ ಕುರಿತಂತೆ ಶೀಘ್ರವೇ ನಿರ್ಧರಿಸಲಾಗುವುದು ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಸಕಾಲ ಖಾತೆ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ಣ ಪ್ರಮಾಣದ ಶಾಲೆ ಆರಂಭಿಸುವ ಕುರಿತಂತೆ ವಿದ್ಯಾರ್ಥಿಗಳು ಸೇರಿದಂತೆ ಪಾಲಕರ ಬೇಡಿಕೆ ಇದೆ. ಶಾಲೆಗಳಿಗೆ ಭೇಟಿಯ ಸಂದರ್ಭಗಳಲ್ಲಿ ಆನ್‍ಲೈನ್ ತರಗತಿಗಳಿಂದ ಏಕಾಗ್ರತಾ ಕಡಿಮೆಯಾಗಿದೆ. ಪೂರ್ಣ ಪ್ರಮಾಣದ ತರಗತಿಗಳ ಆರಂಭಿಸುವಂತೆ ಬೇಡಿಕೆ ಬಂದಿದೆ ಎಂದು ತಿಳಿಸಿದರು.
ಸದ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ಆಧರಿಸಿ ಆನ್‍ಲೈನ್ ತರಗತಿ ವಂಚಿತ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಎಸ್.ಒ.ಪಿ. ಅನುಸರಿಸಿ ಆಗಸ್ಟ್ 23 ರಿಂದ 9 ಮತ್ತು 10ನೇ ತರಗತಿ ಆರಂಭಿಸಲಾಗಿದೆ. ಸೆಪ್ಟೆಂಬರ್ 6 ರಿಂದ 6 ರಿಂದ 8 ನೇ ತರಗತಿಗಳನ್ನು ಆರಂಭಿಸಲಾಗುವುದು. ಕೋವಿಡ್ 3ನೇ ಅಲೆಯ ಹಿನ್ನೆಲೆಯಲ್ಲಿ ಮುಂದಿನ ಒಂದುವಾರ ಅಥವಾ 10 ದಿನಗಳಲ್ಲಿ ಪೂರ್ಣ ಪ್ರಮಾಣದ ಶಾಲೆಗಳ ಆರಂಭ ಕುರಿತಂತೆ ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕಳೆದ ಒಂದೂವರೆವರ್ಷದಿಂದ ಕೋವಿಡ್ ಕಾರಣ ಸ್ಥಗಿತಗೊಂಡಿದ್ದ ತರಗತಿಗಳ ಆರಂಭದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಸ್ಥಗಿತಗೊಂಡಿದ್ದ ಸೇತುಬಂಧ ಶೈಕ್ಷಣಿಕ ಕಾರ್ಯಕ್ರಮವನ್ನು ಪುನಃ ಆರಂಭಿಸಲಾಗುವುದು ಎಂದರು.
ಶುಲ್ಕ ಸಮಸ್ಯೆ ಪರಿಹಾರ: ಖಾಸಗಿ ಶಾಲಾ ಶುಲ್ಕ ಸಮಸ್ಯೆಯನ್ನು ಶೀಘ್ರದಲ್ಲೇ ಸಭೆ ಕರೆದು ತೀರ್ಮಾನಿಸಲಾಗುವುದು. ಖಾಸಗಿ ಶಾಲೆಗಳ ಶುಲ್ಕ ಪಾವತಿ ವಿಷಯವಾಗಿ ಹೈಕೋರ್ಟ್ ಸ್ಟೇ ನೀಡಿದೆ. ಮುಂದಿನ ದಿನಗಳಲ್ಲಿ ನ್ಯಾಯಲಯದ ಹೊರಗೆ ಪೋಷಕರ, ಶಾಲಾ ವ್ಯವಸ್ಥಾಪನಾ ಸಮಿತಿ ಜೊತೆಗೆ ಚರ್ಚಿಸಲಾಗುವುದು. ಖಾಸಗಿ ಶಾಲಾ ಶುಲ್ಕ ನಿಗದಿ ಕುರಿತು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಶಿಕ್ಷಣ ಇಲಾಖೆಯಲ್ಲಿ ಪಠ್ಯಕ್ರಮ, ಭಾಷಾ ಮಾಧ್ಯಮ ಒಳಗೊಂಡಂತೆ ಹಲವು ಸಮಸ್ಯೆಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಪರಿಹಾರವಾಗಿದೆ. ಖಾಸಗಿ ಸರ್ಕಾರಿ ಶಾಲೆಗಳಿಗೆ ಏಕ ರೀತಿಯ ಪಠ್ಯಕ್ರಮ ಜಾರಿಯಾಗಲಿದೆ. ಮಾತೃ ಭಾಷೆ ಶಿಕ್ಷಣ ಸೇರಿದಂತೆ ಬಹುಪಾಲು ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.
ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕುರಿತಂತೆ ಆದ್ಯತೆ ನೀಡಲಾಗುವುದು. ರಾಜ್ಯದಲ್ಲಿ 48 ಸಾವಿರಕ್ಕಿಂತ ಅಧಿಕ ಶಾಲೆಗಳಿವೆ, ಎಲ್ಲ ಶಾಲೆಗಳಿಗೂ ಜಲಜೀವನ ಯೋಜನೆಯಡಿ ಕುಡಿಯುವ ನೀರು ಹಾಗೂ ಸ್ವಚ್ಛ ಭಾರತ ಮಿಷನತ್ ಯೋಜನೆಯಡಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿ ವರ್ಷ ಒಂದು ಸಾವಿರ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ಗುರಿ ಹಾಕಿಕೊಳ್ಳಲಾಗಿದೆ. 2020ರ ಇಸ್ವಿಯಿಂದ ಆರಂಭಿಸಲಾಗಿದ್ದು, 2030ರವರೆಗೆ ಈ ಪ್ರಕ್ರಿಯೆ ಮುಂದುವರೆಯಲಿದೆ. ಸರ್ಕಾರಿಂದ ಆರಂಭಿಸಲಾಗುತ್ತಿರುವ ಇಂಗ್ಲೀಷ ಮಾಧ್ಯಮ ತರಗತಿಗಳಿಗೆ ಬೋಧಿಸಲು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಇಂಗ್ಲೀಷ್ ಕಲಿಕೆಯ ಗುಣಮಟ್ಟದಲ್ಲಿ ಯಾವುದೇ ಲೋಪವಾಗದಂತೆ ಕ್ರಮವಹಿಸಲಾಗಿದೆ ಎಂದರು.
ಶಾಲೆಗಳಿಗೆ ಭೇಟಿ: ಭೌತಿಕ ತರಗತಿಗಳ ಪರಿಶೀಲನೆಗಾಗಿ ಹಾವೇರಿ ನಗರದ ನಂಬರ-2 ಶಾಲೆ, ಕೆರೆಮತ್ತಿಹಳ್ಳಿ, ಬಂಕಾಪುರದ ಕೊಟ್ಟಿಗೇರಿ, ನಾರಾಯಣಪುರದ ಕರ್ನಾಟಕ ಪಬ್ಲಿಕ್ ಶಾಲೆ, ಇಬ್ರಾಹಿಂಪುರ, ಸದಾಶಿವಪೇಟೆಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಪ್ರಾಥಮಿಕ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಶಾಲಾ ವಾತಾವರಣ, ಶೌಚಾಲಯ ವ್ಯವಸ್ಥೆ, ಕೋವಿಡ್ ಮಾರ್ಗಸೂಚಿಗಳ ಅನುಪಾಲನೆ ಕುರಿತಂತೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಮಾತುಕತೆನಡೆದಿದರು. ಕೋವಿಡ್ ಸಂದರ್ಭದಲ್ಲಿ ಮುನ್ನೆಚ್ಚರಿಕೆಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ವಿತರಣೆ, ಕೆಲ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ವಿಭಾಗದ ಉದ್ಘಾಟನೆ, ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ನೆರವೇರಿಸಿದರು.
ಧಾರವಾಡದ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಮಮತಾ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು.