Please assign a menu to the primary menu location under menu

NEWSನಮ್ಮರಾಜ್ಯರಾಜಕೀಯ

ಸಾರಿಗೆ ನಿಗಮ, ನೌಕರರ ಜೀವನಮಟ್ಟ ಮೇಲೆತ್ತಲು ಸರ್ಕಾರ ಬದ್ಧ : ಸಿಎಂ ಬಸವರಾಜ ಬೊಮ್ಮಾಯಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಲಾಭದಾಯಕವಾಗಿಸಲು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಪರಿಶೀಲಿಸಲು ಪರಿಣತರ ಸಮಿತಿಯನ್ನು ರಚಿಸಲಾಗುವುದು. ಜತೆಗೆ ನೌಕರರ ಜೀವನ ಪಟ್ಟ ಸುಧಾರಿಸುವ ನಿಟ್ಟಿನಲ್ಲೂ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸ್ಥಾಪನೆಯಾಗಿ 60 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ 60ರ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ನಿಗಮವು ಸಂಕಷ್ಟದಲ್ಲಿದೆ. ಆದರೆ ಸಮಸ್ಯೆಯನ್ನು ಬೆಳೆಯಲು ಬಿಡದೆ ನಾವು ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದಾಯೋತ್ಪನ್ನ ಮಾದರಿಯಿದ್ದರೂ, ನಿಗಮ ನಷ್ಟದಲ್ಲಿರಲು ಕಾರಣಗಳನ್ನು ವಿಶ್ಲೇಷಿಸುವುದರೊಂದಿಗೆ, ನಿಗಮವನ್ನು ಲಾಭದಾಯಕವಾಗಿಸಲು ಸಲಹೆ ಸೂಚನೆಗಳನ್ನು ನೀಡಲು ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ಕೆಎಸ್ಆರ್ಟಿಸಿಗೆ ತನ್ನದೇ ಅಂತರ್ಗತವಾದ ಶಕ್ತಿ ಇದೆ, ವಿಸ್ತಾರವಿದೆ, ಜಾಲವಿದೆ. ಇವುಗಳನ್ನು ಹೆಚ್ಚಿಸುವುದು ಹೇಗೆ ಎಂಬ ಕುರಿತು ಸಹ ಚಿಂತನೆ ನಡೆಸಲಾಗುವುದು. ಜತೆಗೆ ಮುಂದಿನ ದಿನಗಳಲ್ಲಿ ನಿಗಮದ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಿಗಮವನ್ನು ಲಾಭದತ್ತ ಒಯ್ಯಲು ಚಿಂತನೆ, ಕಾರ್ಯವಿಧಾನಗಳಲ್ಲಿ ಬದಲಾವಣೆಯ ಅಗತ್ಯವಿದೆ. ಜತೆಗೆ ಕ್ಷಮತೆಯಿಂದ ನಿಗಮವನ್ನು ಮುನ್ನಡೆಸಲು ಸರ್ಕಾರ ಬದ್ಧವಾಗಿದೆ. ನಿಗಮದ ಸುಧಾರಣೆಯೊಂದಿಗೆ ನೌಕರರ ಜೀವನಮಟ್ಟ ಸುಧಾರಣೆಗೂ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಬಸ್ ಎಂದರೆ ಹಲವು ಅರ್ಥಗಳನ್ನು ಧ್ವನಿಸುತ್ತದೆ- ಪ್ರಯಾಣ, ಜೀವನದ ಪ್ರಯಾಣ, ಎಲ್ಲರಿಗೂ ಸ್ಥಳಾವಕಾಶ ಒದಗಿಸುವ ಸಮಾನತೆಯ ಪರಿಕಲ್ಪನೆ, ನಿರಂತರ ಚಾಲನಾ ಶಕ್ತಿ ಮೊದಲಾದ ವಿಚಾರಗಳು ನಮ್ಮಲ್ಲಿ ಸುಳಿಯುತ್ತವೆ. ಸರ್ಕಾರದಲ್ಲಿ ನಿರಂತರ ಚಲನಶೀಲತೆ ಹೊಂದಿರುವ ಇಲಾಖೆ ಸಾರಿಗೆ ಇಲಾಖೆ ಎಂದು ಸಿಎಂ ಬಣ್ಣಿಸಿದರು.

ಬಸ್ ಚಾಲಕರು ಅತ್ಯಂತ ಜವಾಬ್ದಾರಿಯ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಯಾಣದ ಅವಧಿಯಲ್ಲಿ ನಮ್ಮ ಜೀವ ಅವರ ಕೈಯಲಿರುತ್ತದೆ. ಆದ್ದರಿಂದ ಚಾಲಕರಿಗೆ ಮೊದಲ ಗೌರವ ಸಲ್ಲಿಸುವುದಾಗಿ ತಿಳಿಸಿದರು.

ಜೊತೆಗೆ ವಿಶ್ವದಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಎಷ್ಟೇ ಬದಲಾವಣೆಗಳಾದರೂ, ಬಸ್ ಸೇವೆ ನಿರಂತರವಾಗಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಹಳ್ಳಿಗಳಲ್ಲಿ ಬಸ್ ಬಂದರೆ ಚಟುವಟಿಕೆ ಪ್ರಾರಂಭವಾಗುತ್ತದೆ. ಈ ಎಲ್ಲ ಕಾರಣಗಳಿಗಾಗಿ ನಿಗಮ ತನ್ನದೇ ಆದ ಗೌರವವನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.

ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಹೊಂದಿಕೊಳ್ಳುವ ಜೊತೆಗೆ ಪರಿಸರ ಸ್ನೇಹಿ ವಾಹನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬಿಎಂಟಿಸಿಯು 90 ವಿದ್ಯುತ್ ಚಾಲಿತ ಬಸ್‌ಗಳನ್ನು ಖರೀದಿಸುತ್ತಿದೆ. ಅಂತೆಯೇ ಕೆ.ಎಸ್.ಆರ್.ಟಿ.ಸಿಯು 642 ಹೊಸ ಬಸ್ ಗಳನ್ನು ಖರೀದಿಸುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ನಾಲ್ಕೂ ನಿಗಮಗಳ ಅಪಘಾತ ರಹಿತ ಚಾಲನೆ ಮಾಡಿದ 60 ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ 60ನೇ ವರ್ಷದ ಸವಿ ನೆನಪಿಗೆ ಅಂಚೆ ಲಕೋಟೆ ಬಿಡುಗಡೆ ಹಾಗೂ ಕೆಂಪೇಗೌಡ ಬಸ್ ನಿಲ್ದಾಣ 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಜತೆಗೆ ನೌಕರರು ಮತ್ತು ಕುಟುಂಬದವರ ಅನುಕೂಲಕ್ಕಾಗಿ ಇನ್ಫೋಸಿಸ್ ಸಹಯೋಗದೊಂದಿಗೆ ಡಿಜಿಟಲ್ ಲರ್ನಿಂಗ್ ಕಾರ್ಯಕ್ರಮ ಹಾಗೂ ಆನ್‌ಲೈನ್ ನಲ್ಲಿ ನೌಕರರ ಕುಂದುಕೊರತೆ ನಿವಾರಣಾ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

ಸಚಿವರಾದ ಬಿ. ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ. ನಾಗೇಶ್, ಆನಂದ್ ಸಿಂಗ್, ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷ ಎಂ.ಚಂದ್ರಪ್ಪ, ಶಾಸಕ ರಿಜ್ವಾನ್ ಅರ್ಷದ್, ಕರ್ನಾಟಕದ ಛೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್, ಸಾರಿಗೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ರಸ್ತೆ ಸಾರಿಗೆ ನಿಗಮ ಸಾಕಷ್ಟು ಸೇವೆ ಒದಗಿಸುತ್ತಿದೆ.  ಖಾಸಗಿ ಸಾರಿಗೆ ಸಂಸ್ಥೆಗಳಿಗಿಂತ ಹೆಚ್ಚಿನ ಜನರು ಸರ್ಕಾರಿ ಸಾರಿಗೆಯಲ್ಲಿಯೇ ಸಂಚಾರ ಮಾಡುತ್ತಾರೆ. ಆದರೂ ನಿಗಮವು ಯಾಕೆ ನಷ್ಟದಲ್ಲಿರುತ್ತದೆ ಎಂಬುದು ಪ್ರಯಾಣಿಕರು ಹಾಗೂ ಸಾರ್ವಜನಿಕರ ಪ್ರಶ್ನೆ. ಅಲ್ಲದೆ ನಿಗಮ ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ ಎಂಬ ಆಪಾದನೆಗಳಿದ್ದು ಈ ಆಪಾದನೆ ಹೋಗಲಡಿಸಲು  ಮಹತ್ವದ ತೀರ್ಮಾನ ತೆಗೆದುಕೊಂಡಿದ್ದೇನೆ. ಅದೇನೆಂದರೆ ಪರಿಣತರ ಸಮಿತಿ ರಚಿಸುವುದು. ಈ ಮೂಲಕ ಸಾರ್ವಜನಿಕರು ಮತ್ತು ನೌಕರರ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗುವುದು.

l ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ 

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...