NEWSಕೃಷಿನಮ್ಮರಾಜ್ಯ

ಬ್ರ್ಯಾಂಡಿಂಗ್‍ದೊಂದಿಗೆ ಕೃಷಿ ವ್ಯವಹಾರದಲ್ಲಿ ಯುವ ರೈತರು ತೊಡಗಿಸಿಕೊಳ್ಳಿ: ಶೋಭಾ ಕರಂದ್ಲಾಜೆ ಕರೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕೇವಲ ಕೃಷಿ ಉತ್ಪಾದನೆ ಮಾಡುವ ಬದಲು ಬೆಳೆದ ಉತ್ಪನ್ನ ಸಂಸ್ಕರಣೆ ಮಾಡಿ ಬ್ರ್ಯಾಂಡಿಂಗ್‍ದೊಂದಿಗೆ ಕೃಷಿ ವ್ಯವಹಾರದಲ್ಲಿ ಯುವ ರೈತರು ತೊಡಗಿಸಿಕೊಳ್ಳಬೇಕು ಎಂದು ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕರೆ ನೀಡಿದರು.

ಶನಿವಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ “ಯುವಕರ ನಡೆ-ಕೃಷಿ ಕಡೆ” ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ವಿಶ್ವಕ್ಕೆ ಅನ್ನ ನೀಡುವ ರೈತನ ಬೆಳೆಗೆ ಸೂಕ್ತ ದರ ಮತ್ತು ಮಾರುಕಟ್ಟೆ ಸಿಗದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದನ್ನು ತಪ್ಪಿಸಲು ಕೃಷಿ ಸಂಸ್ಕರಣೆ, ಬ್ರ್ಯಾಂಡಿಂಗ್, ಮಾರುಕಟ್ಟೆಯೊಂದಿಗೆ ರಫ್ತಿಗೂ ರೈತರು ಹೆಚ್ಚಿನ ಒತ್ತು ನೀಡಬೇಕಿದೆ. ಇದರಿಂದ ಆರ್ಥಿಕ ಪ್ರಗತಿ ಕಾಣಲು ಸಾಧ್ಯ ಎಂದರು.

ಕಲ್ಯಾಣ ಕರ್ನಾಟಕ ಭಾಗವು ಜ್ಞಾನ, ವಿದ್ಯೆ, ಸಂಸ್ಕøತಿಯ ತವರೂರಾಗಿದೆ. ಫಲವತ್ತಾದ ಮಣ್ಣು ಇಲ್ಲಿದ್ದರು ಸಹ ಹಿಂದುಳಿದ ಹಣೆಪಟ್ಟಿ ಕಟ್ಟಿಕೊಂಡಿದೆ. ಇದನ್ನು ಕಳಚಲು ದುಡಿಯಲು ಪಟ್ಟಣಕ್ಕೆ ಹೋದ ಯುವಕರನ್ನು ಮರಳಿ ಕೃಷಿ ಕಡೆಗೆ ತರುವ ನಿಟ್ಟಿನಲ್ಲಿ ಬಸವರಾಜ ಪಾಟೀಲ ಸೇಡಂ ಅವರು ಸಂಕಲ್ಪ ಮಾಡಿದ್ದಾರೆ. ಯುವಕರು ಕೃಷಿ ಕಡೆಗೆ ಬರಬೇಕು, ಕೃಷಿಯನ್ನು ಲಾಭದಾಯಕ ಕ್ಷೇತ್ರವನ್ನಾಗಿಸಬೇಕಿದೆ. ಸರ್ಕಾರ ಎಲ್ಲಾ ರೀತಿಯ ಸವಲತ್ತು ನೀಡಲಿದೆ ಎಂದರು.

ದೇಶದಲ್ಲಿ ಶೇ.70ರಷ್ಟು ಖಾದ್ಯ ತೈಲ ಮಲೇಶಿಯಾ, ಇಂಡೋನೇಷಿಯಾದಿಂದ ಅಮದು ಮಾಡಿಕೊಳ್ಳಲಾಗುತ್ತಿದೆ. ಸ್ವಾವಲಂಬನೆ ನಿಟ್ಟಿನಲ್ಲಿ ದೇಶದಲ್ಲಿಯೇ ಖಾದ್ಯ ತೈಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೃಷಿ ಉತ್ಪನ್ನಗಳ ರಫ್ತು ಹೆಚ್ಚಿಸಲು ಇದೇ ಸೆ.22 ರಂದು ಡಿ.ಜಿ.ಎಫ್.ಟಿ. ಮತ್ತು ಕೃಷಿ ಸಂಬಂಧಿತ ಉತ್ಪಾದಕರ ಸಭೆ ಕರೆಯಲಾಗಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ರೈತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 1.31 ಲಕ್ಷ ಕೋಟಿ ರೂ. ಹಣ ಆಯವ್ಯಯದಲ್ಲಿ ಕೃಷಿ ವಲಯಕ್ಕೆ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೊಂಡಿಯಾಗಿ ತಾವು ಕಾರ್ಯನಿರ್ವಹಿಸುವುದಾಗಿ ಇದೇ ಪ್ರಥಮ ಬಾರಿಗೆ ಕೇಂದ್ರ ಸಚಿವರಾದ ನಂತರ ಜಿಲ್ಲೆಗೆ ಆಗಮಿಸಿದ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

10 ಸಾವಿರ ಕೃಷಿ ಉತ್ಪಾದಕರ ಸಂಘ ರಚನೆ: ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಹಾಗೂ ರೈತಾಪಿ ವರ್ಗ ಅರ್ಥಿಕವಾಗಿ ಬಲವರ್ಧನೆಗೊಳಿಸಲು ದೇಶಾದ್ಯಂತ 10 ಸಾವಿರ ಕೃಷಿ ಉತ್ಪಾದಕರ ಸಂಘ (ಎಫ್‍ಪಿಓ) ರಚಿಸಲು ಉದ್ದೇಶಿಸಲಾಗಿದೆ. ಸಂಘಗಳ ಮೂಲಕ ರೈತರಿಗೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ, ಸೂಕ್ತ ಬೆಲೆ ಜತೆಗೆ ಕೃಷಿ ಕಾರ್ಯಕ್ಕೆ ಬೇಕಾಗುವ ಮೂಲ ಸೌಕರ್ಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆರ್ಥಿಕ ಸೌಲಭ್ಯ ಕಲ್ಪಿಸುವುದರ ಮೂಲಕ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ತರಲು ಯೋಜಿಸಲಾಗುತ್ತಿದೆ ಎಂದರು.

ಇದಕ್ಕು ಮುನ್ನ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ಮಾತನಾಡಿ ಬೆಂಗಳೂರು ರಾಜ್ಯದ ರಾಧಾನಿಯಾದರೆ, ಬಸವಾದಿ ಶರಣ ನಾಡು ಬಸವಕಲ್ಯಾಣವನ್ನು ಸಾಂಸ್ಕøತಿಕ ರಾಜಧಾನಿಯಾಗಿ ಮಾಡಲಾಗುವುದು. ಶರಣರ ನಾಡು ಬೇಡುವ ಕೈ ಬದಲಾಗಿ ಕೊಡುವ ಕೈ ಆಗಬೇಕು. ಆ ನಿಟ್ಟಿನಲ್ಲಿ ಪರಿವರ್ತನೆ ಮುಂದಾಗಿದ್ದೇವೆ.

ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಲ್ಯಾಣ ಪ್ರದೇಶದ ಬಗ್ಗೆ ಅತೀವ ಆಸಕ್ತಿ ಹೊಂದಿ ಇಲ್ಲಿನ ಜನರ ಕಲ್ಯಾಣಕ್ಕಾಗಿ ಮತ್ತು ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣದ ಜವಾಬ್ದಾರಿ ನನಗೆ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ ಪ್ರದೇಶದ ರೈತರ ಸಹಾಯಕ್ಕಾಗಿ ಬೀದರ, ಕಲಬುರಗಿ ಮತು ಯಾದಗಿರಿಯಲ್ಲಿ ಬೀಜ ಮತ್ತು ರಸಗೊಬ್ಬರ ಸಂಶೋಧನಾ ಕೇಂದ್ರ ತೆಗೆಯಬೇಕು ಎಂದು ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲಿ ಮನವಿ ಮಾಡಿಕೊಂಡರು.

ರೈತರ ಮನೋಭಾವನೆ ಬದಲಾಗಲಿ: ಹೈದ್ರಾಬಾದಿನ ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಮತ್ತು ಎಕ್ಸ್‍ಟೆನ್ಷನ್ ಮ್ಯಾನೇಜ್‍ಮೆಂಟ್ (ಮ್ಯಾನೇಜ್) ಮಹಾನಿರ್ದೇಶಕ ಡಾ. ಚಂದ್ರಶೇಖರ ಇವರು ಕೃಷಿ ಉದ್ಯಮಶೀಲತಾ ಅಭಿವೃದ್ಧಿ ಕುರಿತು ಮಾತನಾಡಿ, ರೈತರು ಕೇವಲ ಉತ್ಪಾದನೆ ಮಾಡುವುದಷ್ಟೆ ನಮ್ಮ ಕೆಲಸ ಎಂಬ ಮನೋಭಾವನೆಯನ್ನು ಮೊದಲು ಬದಲಾಯಿಸಿಕೊಳ್ಳಬೇಕಿದೆ. ಕೃಷಿ ಬೆಳೆಯುವುದರ ಜೊತೆಗೆ ಅಗ್ರಿ ಬಿಸಿನೆಸ್ (ಕೃಷಿ ವ್ಯವಹಾರ) ಮಾಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಕೃಷಿಗೆ ಭವಿಷ್ಯ ಇದೆಯೇ ಎಂದು ಪ್ರಶ್ನಿಸುವ ಯುವ ರೈತರು ಮಾನವ ಕುಲ ಇರೋವರೆಗೂ ಕೃಷಿಗೆ ಭವಿಷ್ಯ ಇದೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಉದಾಹರಣೆಗೆ ಕೃಷಿ ಉತ್ಪನ್ನವೊಂದು 100 ರೂ. ಗಳಿಗೆ ದೊರೆತರೆ 50 ರೂ. ರೈತನಿಗೆ, ಇನ್ನುಳಿದ ಮೊತ್ತ ಸಂಸ್ಕರಣೆ, ಮಾರುಕಟ್ಟೆಯವರಿಗೆ ಹೋಗುತ್ತದೆ. 100 ರೂ. ಅನ್ನದಾತನಿಗೆ ಸಿಗಬೇಕಾದರೆ ಸಂಸ್ಕರಣೆ, ಬ್ರ್ಯಾಂಡಿಂಗ್, ಮಾರುಕಟ್ಟೆ ವ್ಯವಹಾರದಲ್ಲಿ ರೈತರು ಖುದ್ದು ತೊಡಗಿಕೊಳ್ಳಬೇಕಿದೆ.

ಮಣ್ಣಿನ ಗುಣಧರ್ಮ ಅರಿತು ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಬೆಳೆ ಬೆಳೆಯಬೇಕಿದೆ. ತಾಂತ್ರಿಕ ಮತ್ತು ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. ಒಂದು ಬೆಳೆ ಬದಲಾಗಿ ಮಿಶ್ರ ಬೆಳೆ ಬೆಳೆಯಬೇಕಿದೆ. ಕೃಷಿ ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ ಮಾಡಿ ಲಾಭ ಗಳಿಸಬೇಕಾಗಿದೆ ಎಂದು ವಿವರಿಸಿದ ಡಾ. ಚಂದ್ರಶೇಖರ ಅವರು ದೇಶದಾದ್ಯಂತ 75 ಸಾವಿರ ಕೃಷಿ ಪದವೀಧರರಿಗೆ ಕೃಷಿ ಉದ್ಯಮಶೀಲತಾ ಅಭಿವೃದ್ದಿಯ ತರಬೇತಿ ನೀಡಿದ ಫಲವಾಗಿ ತರಬೇತಿ ಪಡೆದವರು ನೂರಾರು ಯುವಕರಿಗೆ ಇಂದು ಉದ್ಯೋಗ ನೀಡುತ್ತಿದ್ದಾರೆ ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಎ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಹೈದ್ರಾಬಾದ್ ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್, ಎಕ್ಸ್‍ಟೆನ್ಷನ್ ಮ್ಯಾನೇಜ್‍ಮೆಂಟ್ (ಮ್ಯಾನೇಜ್) ನಿರ್ದೇಶಕ (ಎಂ & ಇ) ಡಾ. ಗುಮ್‍ಗೋಳ ಮಠ ಅವರು ಎಫ್.ಪಿ.ಓ. ಕುರಿತು, ಡಾ. ಗೋಪಾಲ ಸುತಾರಿಯಾ ಅವರು ಗೋಕೃಪಾಮೃತ ಮತ್ತು ಸಾವಯವ ಕೃಷಿ ಕುರಿತು, ಕ್ರಿಯಾಜೆನ್ ಎಂ.ಡಿ. ಬಸವರಾಜ ಗಿರೆನ್ನವರ ಅವರು ಯುವ ರೈತರು ಮತ್ತು ಕೃಷಿ ಉದ್ಯಮಿಗಳಿಗೆ ಕೃಷಿ ವಿನ್ಯಾಸ ಕುರಿತು ಹಾಗೂ ತುಮಕೂರಿನ ಯುವ ಸಸ್ಯ ವಿಜ್ಞಾನಿ ಮಂಜುನಾಥ ಅವರು ಸಾವಯವ ಕೃಷಿ ಕುರಿತು ಉಪನ್ಯಾಸ ನೀಡಿದರು.

ಸನ್ಮಾನ: ಇದೇ ಸಂದರ್ಭದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯ ಕೃಷಿ ವಿಜ್ಞಾನ ಪ್ರೋತ್ಸಾಹನ ಪುರಸ್ಕಾರ-2020 ಪುರಸ್ಕೃತ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ರಾಜು ತೆಗ್ಗಳ್ಳಿ ಹಾಗೂ ಜಗಜೀವನ ರಾಮ ಅಭಿನವ ಕಿಸಾನ್ ಪುರಸ್ಕಾರ-2020 ಪುರಸ್ಕೃತ ಕಲಬುರಗಿ ತಾಲೂಕಿನ ಹಾಳಸುಲ್ತಾನಪುರದ ಅನುಭವಿ ರೈತ ಶರಣಬಸಪ್ಪ ಪಾಟೀಲ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಗಣ್ಯರು ಸನ್ಮಾನಿಸಿದರು.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ