ಬಿಎಸ್ವೈ ಸರ್ಕಾರ ಕನೆಕ್ಟಿಂಗ್ ಫ್ಯಾಮಿಲಿಯಾಗಿತ್ತು- ಬೊಮ್ಮಾಯಿ ಸರ್ಕಾರ ಕನೆಕ್ಟಿಂಗ್ ಪೀಪಲ್ ಆಗಿದೆ : ಎಚ್.ವಿಶ್ವನಾಥ್
ಮೈಸೂರು: ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಕನೆಕ್ಟಿಂಗ್ ಫ್ಯಾಮಿಲಿಯಾಗಿತ್ತು. ಆದರೆ ಇದೀಗ ಬಸವರಾಜ ಬೊಮ್ಮಾಯಿ ಸರ್ಕಾರ ಕನೆಕ್ಟಿಂಗ್ ಪೀಪಲ್ ಆಗಿದೆ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಹೊಗಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ನೆರಳಲ್ಲ. ಅವರು ರಾಜ್ಯಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ. ಜನರ ಸುತ್ತ ಅಭಿವೃದ್ಧಿ ಸುತ್ತಬೇಕು, ಅಭಿವೃದ್ಧಿ ಸುತ್ತ ಜನ ಸುತ್ತಬಾರದು ಅನ್ನೋದನ್ನು ತೋರಿಸಿದ್ದಾರೆ ಎಂದರು.
ಇನ್ನು ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂಬ ಅಮಿತ್ ಶಾ ಹೇಳಿಕೆಗೆ ವಿಶ್ವನಾಥ್ ಬೆಂಬಲ ಸೂಚಿಸಿದ್ದು, ಯಾರು ಸಿಎಂ ಪಕ್ಷದ ಅಧ್ಯಕ್ಷರಾಗಿರುತ್ತಾರೋ ಅವರದ್ದೇ ನಾಯಕತ್ವ ಇರುತ್ತದೆ. ಸಾಮೂಹಿಕ ನಾಯಕತ್ವ ಇದ್ದರೂ ಒಬ್ಬ ಮೇಟಿ ಬೇಕು. ಅದು ಬಿಜೆಪಿಯಲ್ಲಿ ಬೊಮ್ಮಾಯಿ ಆಗಿದ್ದಾರೆ ಎಂದು ತಿಳಿಸಿದರು.
ಚಿನ್ನ ಉಜ್ಜಿದಷ್ಟು ಹೊಳಪು ಬರುತ್ತದೆ. ನಡೆಯಲಿ ಮರು ಸರ್ವೇ, ಸತ್ಯ ಹೊರಬರಲಿ. ಸಾ.ರಾ ಮಹೇಶ್ ಒತ್ತುವರಿ ಮಾಡಿಲ್ಲವಾದರೆ ಭಯ ಏಕೆ..?, ಒತ್ತುವರಿ ಮಾಡಿಕೊಂಡವರಿಗೆ ಸರ್ವೇಯ ಭಯವಿರುತ್ತದೆ. ಹಿಂದಿನ ಸರ್ವೇ ವರದಿ ಪ್ರಾಮಾಣಿಕವಾಗಿರಲಿಲ್ಲ. ಇದನ್ನು ನಾನು ಮೊದಲೇ ಹೇಳಿದ್ದೆ. ವರದಿ ಹೇಗೆ ನೀಡಿದರು ಅನ್ನೋದು ಜನರಿಗೂ ಗೊತ್ತಿದೆ ಎಂದು ಭೂ ಒತ್ತುವರಿಗೆ ಸರ್ವೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಶಾಸಕ ಸಾ.ರಾ ಮಹೇಶ್ ಹಾಗೂ ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದರು.
ಎಸ್.ಟಿ ಸೋಮಶೇಖರ್ ಸರ್ಕಾರದ ಭಾಗ. ಅವರು ಈ ರೀತಿ ಹೇಳಿಕೆ ನೀಡಬಾರದು. ಅಧಿಕಾರಿಗೆ ಸರ್ಕಾರವೇ ಅಧಿಕಾರ ನೀಡಿದೆ. ಆ ಅಧಿಕಾರ ಬಳಸಿ ಅವರು ಆದೇಶ ಮಾಡಿದ್ದಾರೆ. ಇದನ್ನು ವಿರೋಧಿಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕ್ರೆಡಿಟ್ ವಿಚಾರದ ಕುರಿತು ಮಾತನಾಡಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಿಶ್ವನಾಥ್ ಮತ್ತೆ ವಾಗ್ದಾಳಿ ನಡೆಸಿದರು. ಮುಂದೆ ಮೈಸೂರು ಕಟ್ಟಿಸಿದ್ದು ನಾನೇ ಅನ್ನುತ್ತಾರೆ.
ಪ್ರತಾಪ್ ಸಿಂಹ ತಮ್ಮ ಸ್ಥಾನಕ್ಕೆ ಗೌರವವಿಟ್ಟು ಮಾತನಾಡಲಿ. ಅವರ ನಿನ್ನೆಯ ಪತ್ರವೂ ಸಂಸದರ ಸ್ಥಾನಕ್ಕೆ ಗೌರವ ತರುವ ಪತ್ರವಲ್ಲ. ಹಿಂದಿನ ಸರ್ಕಾರದಲ್ಲೇ ದಶಪಥ ರಸ್ತೆ ಯೋಜನೆಗೆ ದಾಖಲೆ ಇದೆ. ಹೀಗಾಗಿ ಯೋಜನೆ ತಮ್ಮದೇ ಅಂತಾ ಹೇಳಿಕೊಳ್ಳುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.