ಹಾವೇರಿ: ಹನುಮನಮಟ್ಟಿ ಕೃಷಿ ವಿಜ್ಞಾನ ಕೇದ್ರದ ವತಿಯಿಂದ ರಾಣೇಬೆನ್ನೂರ ತಾಲ್ಲೂಕಿನ ಕಮದೋಡ ಗ್ರಾಮದ ರೈತರಾದ ಗಣೇಶ ಆರ್ ಕುಂಟೇರ್ ಅವರ ಕ್ಷೇತ್ರದಲ್ಲಿ ತೊಗರಿಯಲ್ಲಿ ಕುಡಿ ಚಿವುಟಿಕೆಯ ಪ್ರಾತ್ಯಕ್ಷತೆ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಅಶೋಕ ಪಿ. ಅವರು ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ತೊಗರಿ ಬೆಳೆಯನ್ನು ಇತ್ತೀಚೆಗೆ ಏಕ ಬೆಳೆಯಾಗಿ ಹಾಗೂ ಅಂತರ ಬೆಳೆಯಾಗಿ ಬೆಳೆಯುತಿದ್ದು, ದ್ವಿದಳ ಧಾನ್ಯಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಕಂಡುಕೊಂಡಿದೆ.
ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವ ಶಕ್ತಿ ದ್ವಿದಳ ಧಾನ್ಯಗಳಿಗಿವೆ. ದ್ವಿದಳ ಧಾನ್ಯಗಳು ಎˉÁ್ಲ ವರ್ಗದ ರೈತರು ಬೆಳೆಯುವ ಬೆಳೆಗಳಾಗಿದ್ದು, ಶೇಕಡ 70ರಷ್ಟು ದ್ವಿದಳ ಧಾನ್ಯಗಳು ಅಭಿವೃದ್ಧಿ ಹೊಂದಿದ ದೇಶಗಳಿಂದ ಉತ್ಪಾದನೆಯಾಗುತ್ತಿದೆ ಎಂದರು.
ಭಾರತವು 44.29 ಲಕ್ಷ ಹೆಕ್ಟೇರ್ ಕ್ಷೇತ್ರದಿಂದ 35.69 ಲಕ್ಷ ಟನ್ ತೊಗರಿ ಉತ್ಪಾದಿಸುತ್ತಿದ್ದು, ಉತ್ಪಾದಕತೆಯು ಹೆಕ್ಟೇರಿಗೆ 806 ಕೆ.ಜಿ (ಕಡಿಮೆ) ಇರುವುದರಿಂದ ಇಂದಿನ ಜನಸಂಖ್ಯೆಗೆ ಬೇಕಾದ ಪ್ರಮಾಣವನ್ನು ಪೂರೈಸಲು ಇನ್ನೂ ಗುರಿ ಮುಟ್ಟಬೇಕಿದೆ.
ಕರ್ನಾಟಕದಲ್ಲಿ 18.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯುತ್ತಿದ್ದು, 11.15 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ಉತ್ಪಾದಕತೆಯು ಹೆಕ್ಟೇರಿಗೆ 630 ಕೆ.ಜಿ (ಕಡಿಮೆ) ಇರುವುದರಿಂದ ಉತ್ಪಾದನೆಯನ್ನು ಹೆಚ್ಚಿಸಿ ಆರೋಗ್ಯ ರಕ್ಷಣೆಯಲ್ಲಿ ಮುಂದಾಗಬೇಕಾಗಿದೆ ಎಂದರು.
ಈ ಬೆಳೆಯನ್ನು ಇಡಿ ಬೆಳೆಯಾಗಿ ಹಾಗೂ ಉದ್ದು, ಹೆಸರು, ಎಳ್ಳು, ಜೋಳ, ಸಜ್ಜೆ ಮತ್ತು ಸೋಯಾ ಅವರೆಗಳೊಡನೆ ಅಂತರಬೆಳೆಯಾಗಿಯೂ ಬೆಳೆಯಲಾಗುತ್ತಿದೆ. ತೊಗರಿ ಬೆಳೆಯು ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತದೆ.
ಇದು ಪ್ರತಿ ಹೆಕ್ಟೇರಿಗೆ 20 ಕಿ.ಗ್ರಾಂ. ನಂತೆ ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಿಸುವುದಲ್ಲದೆ, ಕಟಾವಿನ ನಂತರ ಬೇರುಗಳು ಭೂಮಿಯಲ್ಲಿ ಉಳಿಯುವುದರಿಂದ ಹಾಗೂ ಬೆಳವಣಿಗೆಯ ಹಂತದಲ್ಲಿ ಎಲೆಗಳು ಉದುರುವುದರಿಂದ ಭೂಮಿಯ ಭೌತಿಕ, ರಸಾಯನಿಕ, ಜೈವಿಕ ಕಿೃಯೆಗಳಿಗೆ ಚಾಲನೆ ದೊರೆತು ಮಣ್ಣಿನ ಫಲವತ್ತತೆಯಲ್ಲಿ ಸ್ಥಿರತೆಯನ್ನು ಕಾಪಾಡುತ್ತದೆ ಎಂದು ಹೇಳಿದರು.
ತೊಗರಿಯಲ್ಲಿ ಕುಡಿ ಚಿವುಟಿಕೆಯ ಪ್ರಾತ್ಯಕ್ಷತೆ ಮಾಡಿ, ಬಿತ್ತನೆಯಾದ 45 – 50 ದಿನಗಳಲ್ಲಿ ಮೇಲಿನಿಂದ ಬೆಳೆಯುವ ಕುಡಿಯನ್ನು 5 – 6 ಸೆಂ .ಮೀ .ನಷ್ಟು ಚಿವುಟುವುದರಿಂದ ಅತಿ ಎತ್ತರ ಬೆಳೆಯುವುದನ್ನು ತಡೆದು ಹೆಚ್ಚಿನ ಸಂಖ್ಯೆಯಲ್ಲಿ ಕವಲೊಡೆದು ಕಾಯಿಗಳ ಸಂಖ್ಯೆ ಹೆಚ್ಚಾಗಿ ಇಳುವರಿ ಹೆಚ್ಚಾಗುತ್ತದೆ.
ತೊಗರಿಯಲ್ಲಿ ಮೊಗ್ಗು ಮತ್ತು ಹೂ ಉದುರುವುದು ಸ್ವಾಭಾವಿಕ, ಇದರಿಂದ ಇಳುವರಿ ಕಡಿಮೆಯಾಗುತ್ತದೆ. ಇದಕ್ಕಾಗಿ ಇಡಿಟಿಎ ರೂಪದ ಶೇ. 0.5 ಸತುವಿನ ಸಲ್ಪೇಟ್ ಮತ್ತು ಶೇ. 0.2 ಬೋರಾಕ್ಸ್ ಮಿಶ್ರಣವನ್ನು ಹೂವಾಡುವ ಹಂತದಲ್ಲಿ ಎರಡುಬಾರಿ ಸಿಂಪರಣೆ (ಹತ್ತು ದಿನಗಳ ಅಂತರದಲ್ಲಿ) ಮಾಡಬೇಕು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿ ಡಾ. ರಾಜಕುಮಾರ ಜಿ ಆರ್ ಹಾಗೂ ಹವಾಮಾಣ ತಜ್ಞ ಡಾ. ಶಾಂತವೀರಯ್ಯ ಹಾಜರಿದ್ದು, ಮಣ್ಣಿನ ಫಲವತ್ತತೆ ಹಾಗೂ ಹವಾಮಾಣ ಆಧಾರಿತ ಬೆಳೆ ನಿರ್ವಹಣೆ ಮಾಹಿತಿ ನೀಡಿದರು.