ವೇತನ ತಾರತಮ್ಯತೆ ನಿವಾರಿಸಿ ಎಂದು ಮನವಿ ಮಾಡಿದ್ದಕ್ಕೆ ಕೆಲಸದಿಂದಲೇ ವಜಾ!
ಮಡಿಕೇರಿ: ಪೆರಂಬಾಡಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮನ್ನು ವೇತನದಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ದೂರು ಸಲ್ಲಿಸಿದ ಕಾರಣಕ್ಕಾಗಿ ವಿರಾಜಪೇಟೆ ಪಟ್ಟಣ ಪಂಚಾಯಿತಿ ಕೆಲಸದಿಂದ ವಜಾಗೊಳಿಸಿದೆ ಎಂದು ಕಾವಲುಗಾರರಾದ ಎಚ್.ಸಿ.ಗಣೇಶ್ ಹಾಗೂ ಎಚ್.ಟಿ.ಜಾನ್ ಆರೋಪಿಸಿದ್ದಾರೆ.
ಬಡವರಾಗಿರುವ ನಮ್ಮನ್ನು ದಿಢೀರ್ ಆಗಿ ಕೆಲಸದಿಂದ ವಜಾಗೊಳಿಸಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಮತ್ತೆ ನಮಗೆ ನೌಕರಿ ನೀಡಬೇಕು, ವೇತನ ಹೆಚ್ಚಳ ಮಾಡಬೇಕು ಮತ್ತು ಪಿ.ಎಫ್ ಸೇರಿದಂತೆ ನಿಯಮಾನುಸಾರ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ವಿರಾಜಪೇಟೆ ಪಟ್ಟಣ ಪಂಚಾಯಿತಿಯ ಪೆರಂಬಾಡಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ನಮಗೆ ನೇಮಕವಾದ ದಿನದಿಂದ ಮಾಸಿಕ ತಲಾ 14,900 ರೂ. ಗಳಂತೆ ವೇತನ ನೀಡಲಾಗುತ್ತಿತ್ತು.
ಆದರೆ ಕಳೆದ 1 ವರ್ಷ 9 ತಿಂಗಳಿನಿಂದ ಇಬ್ಬರಿಗಾಗಿ ರೂ.14 ಸಾವಿರವನ್ನು ಮಾತ್ರ ನೀಡಲಾಗುತ್ತಿದ್ದು, ಎಚ್.ಟಿ.ಜಾನ್ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಈ ಹಣವನ್ನು ಇಬ್ಬರು ತಲಾ ಸಾವಿರ ರೂ.ಗಳಂತೆ ತೆಗೆದುಕೊಳ್ಳುತ್ತಿದ್ದೇವೆ. ಕಾವಲುಗಾರರಿಗೆ ನೀಡಬೇಕಾದ ಪಿ.ಎಫ್, ಗಂಬೂಟ್, ಮಳೆಕೋಟು ಇತ್ಯಾದಿ ಸೌಲಭ್ಯಗಳು ದೊರೆಯುತ್ತಿಲ್ಲ.
ಕಡಿಮೆ ಸಂಬಳದಿಂದ ಜೀವನ ಸಾಗಿಸಲು ಕಷ್ಟಕರವಾಗಿದ್ದು, ಈ ಬಗ್ಗೆ ವಿರಾಜಪೇಟೆ ಪ.ಪಂ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದೇ ಸೆ.೧ ರಂದು ಪಂಚಾಯಿತಿ ಅಧಿಕಾರಿಗಳು ನಮ್ಮಿಬ್ಬರನ್ನು ಬಲವಂತವಾಗಿ ಕೋಣೆಯಲ್ಲಿರಿಸಿಕೊಂಡು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ ಸಹಿ ಮಾಡುವಂತೆ ಬೆದರಿಸಿದ್ದಾರೆ.
ನಮಗೆ ಬರಲು ಬಾಕಿ ಇದ್ದ ನಾಲ್ಕು ತಿಂಗಳ ವೇತನ ಒಟ್ಟು ರೂ. 65 ಸಾವಿರಗಳನ್ನು ಖಾತೆಗೆ ಹಾಕಲಾಗಿತ್ತು. ಸಹಿ ಹಾಕದಿದ್ದರೆ ಈ ಹಣವನ್ನು ವಾಪಸ್ ಪಡೆಯುವುದಾಗಿ ಹೇಳಿ ಸಹಿ ಮಾಡಿಸಿಕೊಂಡಿದ್ದಾರೆ.
ವೇತನ ಪಡೆದಿರುವುದಾಗಿ ತಿಳಿಸಿರುವ ಪತ್ರ ಇದಾಗಿದೆ, ಆದರೆ ಪಿ.ಎಫ್ ಅನ್ನು ನೀಡದೆ ವಂಚಿಸಲಾಗಿದೆ. ಅಲ್ಲದೆ ಇನ್ನು ಮುಂದೆ ನಿಮಗೆ ಕೆಲಸವಿಲ್ಲವೆಂದು ಹೇಳಿ ಮನೆಗೆ ಕಳುಹಿಸಿದ್ದಾರೆ ಎಂದು ಎಚ್.ಸಿ.ಗಣೇಶ್ ಹಾಗೂ ಎಚ್.ಟಿ.ಜಾನ್ ಆರೋಪಿಸಿದ್ದಾರೆ.
ಅಧಿಕಾರಿಗಳ ಈ ದಿಢೀರ್ ನಿರ್ಧಾರದಿಂದ ನಾವು ಅತಂತ್ರರಾಗಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ನಮಗೆ ಮತ್ತೆ ನೌಕರಿ ನೀಡುವ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.