ಬೆಂಗಳೂರು: ಮುಷ್ಕರದ ವೇಳೆ ವಜಾಗೊಂಡಿದ್ದ ಅಷ್ಟೂ ಸಾರಿಗೆ ನೌಕರರ ಮರು ನೇಮಕಕ್ಕೆ ಸರ್ಕಾರ ಆದೇಶ ನೀಡುವ ಮೂಲಕ ನೌಕರರಿಗೆ ಸಿಹಿಸುದ್ದಿ ನೀಡಿದೆ.
ಸಾರಿಗೆ ಸಚಿವರು ಹಾಗೂ ನೌಕರರ ಸಂಘಟನೆಗಳ ಪದಾಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ 4,200 ಸಾರಿಗೆ ನೌಕರರಿಗೆ ಸಚಿವ ಬಿ.ಶ್ರೀರಾಮುಲು ಸಿಹಿ ಸುದ್ದಿ ನೀಡಿದ್ದಾರೆ.
ಸಭೆ ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ಸಾರಿಗೆ ಯೂನಿಯನ್ ನಾಯಕರ ಜತೆ ಚರ್ಚೆ ಮಾಡಲಾಗಿದೆ. ವಜಾಗೊಂಡಿದ್ದ ಅಷ್ಟೂ ಸಾರಿಗೆ ನೌಕರರನ್ನು ಮರು ನೇಮಕ ಮಾಡಲು ಸರ್ಕಾರ ಆದೇಶ ನೀಡಿದ್ದು, 12 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು. ನಿನ್ನೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲಾಗಿದೆ. ಸಾರಿಗೆ ಇಲಾಖೆಯಲ್ಲಿ ಯಾವುದೇ ರೀತಿ ತೊಂದರೆಯಾಗಬಾರದೆಂದು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ವೇತನ ತಾರತಮ್ಯತೆ ನಿವಾರಣೆ ಬಗ್ಗೆಯೂ ಸಾರಿಗೆ ನೌಕರರ ಬೇಡಿಕೆ ಇಟ್ಟಿದ್ದರು. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆಯೂ ಮಾತಾನಾಡುವ ಯೋಚನೆ ಇದೆ. ಅವರ ಪ್ರಮುಖವಾದ 4,200 ಸಾರಿಗೆ ನೌಕರರನ್ನು ಪುನರ್ ನೇಮಕ ಬಗ್ಗೆ ಒತ್ತಡ ಇತ್ತು. ಈ ಬಗ್ಗೆ ಮೊದಲು ಆದ್ಯತೆ ಕೊಟ್ಟು ಮರು ನೇಮಕ ಮಾಡುತ್ತೇವೆ ಎಂದು ಸಾರಿಗೆ ಸಚಿವ ಹೇಳಿದರು.
ಬಹುತೇಕ ಎಲ್ಲ ಸಮಸ್ಯೆ ಪರಿಹರಿಸೋದಾಗಿ ಶ್ರೀರಾಮುಲು ಭರವಸೆ ನೀಡಿದ್ದಾರೆ. ಕಳೆದ ಮುಷ್ಕರದ ವೇಳೆ 4,200 ನೌಕರರನು ನಿಗಮಗಳು ವಜಾಗೊಳಿಸಿತ್ತು. ಮರು ನೇಮಕಕ್ಕಾಗಿ ಸಾರಿಗೆ ನೌಕರರ ಯೂನಿಯನ್ ಬೇಡಿಕೆ ಇಟ್ಟಿತ್ತು.
ಹಲವಾರು ಪ್ರತಿಭಟನೆ ಸಹ ನಡೆದಿತ್ತು. ರಾಮುಲು ಎಲ್ಲ ನೌಕರರ ಯೂನಿಯನ್ ಮುಖಂಡರನ್ನು ಇಂದು ಕರೆಸಿ ಮಾತುಕತೆ ನಡೆಸಿದರು. ಸಾರಿಗೆ ನೌಕರರ ಮುಖಂಡರಾದ ಅನಂತ ಸುಬ್ಬರಾವ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಪ್ರಕಾಶ್, ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ತಿಪ್ಪೇ ಸ್ವಾಮಿ, ಉಪಾಧ್ಯಕ್ಷ ಸುಧಾಕರ್ ರೆಡ್ಡಿ, ಮಹಿಳಾ ಅಧ್ಯಕ್ಷೆ ಚಂಪಕಾ ಸೇರಿ ಹಲವು ಮುಖಂಡರ ಜತೆ ಚರ್ಚಿಸಿದರು.
ಡಿಪೋಗಳಲ್ಲಿ ಕೆಲಸ ಮಾಡುವ ಸಾರಿಗೆ ನೌಕರರಿಗೆ ಕಿರುಕುಳ, ಸಾರಿಗೆ ನೌಕರರ ಎಲ್ಲ ಸಮಸ್ಯೆ, ಬೇಡಿಕೆಗಳನ್ನು ಬಗೆಹರಿಸುತ್ತೇವೆ. ಸ್ವತಃ ನಾನೇ ಡಿಪೋಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಎಲ್ಲದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಸಚಿವ ಶ್ರೀರಾಮುಲು ಹೇಳಿದರು.