ಬೆಂಗಳೂರು: ಸರ್ಕಾರ ಮತ್ತು ಸಾರಿಗೆ ಸಚಿವರು ಒಂದು ಕಡೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಏಪ್ರಿಲ್ನಲ್ಲಿ ನಡೆದ ಮುಷ್ಕರದ ವೇಳೆ ಏಕಾಏಕಿ ವರ್ಗಾವಣೆ ಮಾಡಿದ್ದ ಸಾರಿಗೆಯ ನಾಲ್ಕೂ ನಿಗಮಗಳ ನೌಕರರನ್ನು ಮತ್ತೆ ಮಾತೃ ಘಟಕಗಳಲ್ಲೇ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಲಾಗುವುದು ಎಂದು ಕಳೆದ ಮೂರು ದಿನದಿಂದಲೂ ಹೇಳುತ್ತಿದ್ದಾರೆ.
ಆದರೆ ಇತ್ತ ಸಾರಿಗೆ ನಾಲ್ಕೂ ನಿಗಮಳಲ್ಲೂ ಇಂದಿಗೂ ಕೂಡ ಸರ್ಕಾರ ಮತ್ತು ಸಚಿವರ ಹೇಳಿಕೆಗೆ ವಿರುದ್ಧವಾಗಿಯೇ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಅಂದರೆ ಈ ಹಿಂದೆ ತಾನು ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದ ನೌಕರರನ್ನು ಮತ್ತೆ ಅದೇ ಸ್ಥಳಕ್ಕೆ ವರ್ಗಾವಣೆ ಮಾಡುವ ಬದಲು ಕೋರಿಕೆ ಮೇರೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸುತ್ತಿವೆ.
ಇದನ್ನು ಗಮನಿಸಿದರೆ, ಸಾರಿಗೆ ಸಚಿವರ ಆದೇಶವನ್ನು ಅಧಿಕಾರಿಗಳು ಸರಾಸಗಟಾಗಿ ತಿರಸ್ಕರಿಸಿ ನೌಕರರನ್ನು ಕೋರಿಕೆ ಮೇರೆಗೆ ವರ್ಗಾವಣೆ ಎಂದು ಮಾಡುವ ಜತೆಗೆ ಘಟಕ ಬದಲಾಯಿಸಿ ಆದೇಶ ಹೊರಡಿಸುತ್ತಲೇ ಇದ್ದಾರೆ.
ಅಂದರೆ ಅಧಿಕಾರಿಗಳು ನೌಕರರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆಯೇ ಅಥವಾ ಸರ್ಕಾರ ಮತ್ತು ಸಾರಿಗೆ ಸಚಿವರು ಮಗುವನ್ನು ಚಿವುಟಿ ತೊಟ್ಟಿಲನ್ನು ತೂಗುವ ಕೆಲಸ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.
ಅಂದರೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಕಳೆದ ಮೂರು ದಿನಗಳಿಂದಲೂ ಮುಷ್ಕರದ ವೇಳೆ ನೌಕರರ ವಿರುದ್ಧ ಜರುಗಿಸಿರುವ ಎಲ್ಲ ಕ್ರಮಗಳನ್ನು ವಾಪಸ್ ಪಡೆದು ನೌಕರರು ಈ ಹಿಂದೆ ಅಂದರೆ ಏಪ್ರಿಲ್ 6ರಲ್ಲಿ ಇದ್ದಂತ ಸ್ಥಿತಿಯಲ್ಲಿ ನೌಕರರನ್ನು ನಡೆಸಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಆದರೆ ಇತ್ತ ನೌಕರರ ವರ್ಗಾವಣೆ ವಿಚಾರದಲ್ಲಿ ಕೋರಿಕೆ ಮೇರೆಗೆ ಎಂದು ತೋರಿಸುವ ಮೂಲಕ ಮತ್ತು ಘಟಕಗಳನ್ನು ಬದಲಾಯಿಸುವ ಮೂಲಕ ಅಂದರೆ ಅದೇ ವಿಭಾಗದ ನೂರಾರು ಕಿಮೀ ದೂರದ ಘಟಕಗಳಿಗೆ ಮತ್ತೆ ವರ್ಗಾವಣೆ ಮಾಡಿ ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ.
ಈ ವರ್ಗಾವಣೆಯಿಂದ ನೌಕರರ ಸೀನಿಯಾರಿಟಿ (ಸೇವಾ ಹಿರಿತನ) ಕಳೆದುಕೊಳ್ಳುವಂತೆ ಮಾಡುವ ಜತೆಗೆ ಒಂದು ರೀತಿ ಶಿಕ್ಷೆ ನೀಡುವುದನ್ನು ಇನ್ನೂ ನಿಲ್ಲಿಸಿದಂತೆ ಕಾಣುತ್ತಿಲ್ಲ. ಇಲ್ಲಿ ಅಧಿಕಾರಿಗಳ ನಡೆ ಒಂದು ದಿಕ್ಕಿಗೆ ಸಾಗುತ್ತಿದ್ದರೆ ಸರ್ಕಾರ ಮತ್ತು ಸಾರಿಗೆ ಸಚಿವರ ದಾರಿ ಮತ್ತೊಂದೆಡೆಗೆ ಸಾಗುತ್ತಿದೆ. ಅಂದರೆ ಸಚಿವರು ಮತ್ತು ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆ ಇದೆಯೇ ಎಂಬ ಅನುಮಾನ ಮೂಡುತ್ತಿದೆ.
ಸರ್ಕಾರ ಮತ್ತು ಸಾರಿಗೆ ಸಚಿವ ಶ್ರೀರಾಮುಲು ಅವರು ಮುಷ್ಕರದ ವೇಳೆ ದೂರದೂರುಗಳಿಗೆ ವರ್ಗಾವಣೆ ಮಾಡಿರುವ ನೌಕರರನ್ನು ಮತ್ತೆ ಅದೇ ಸ್ಥಳಕ್ಕೆ ವರ್ಗಾವಣೆ ಮಾಡುವುದಾಗಿ ಇಂದಿನ (ಸೆ.22) ಅಧಿವೇಶನದಲ್ಲೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಕೋರಿಕೆ ಮೇರೆಗೆ ಎಂದೇ ಆದೇಶ ಹೊರಡಿಸುತ್ತಿದ್ದಾರೆ.
ಆಡಳಿತ ವರ್ಗ ನೌಕರರನ್ನು ಕೋರಿಕೆ ಮೇರೆಗೆ ಎಂದು ವರ್ಗಾವಣೆ ಮಾಡುತ್ತಲೇ ಇದೆ. ಆದರೆ, ಯಾವುದೇ ನೌಕರ ಕೋರಿಕೆ ಮೇರೆಗೆ ವರ್ಗಾವಣೆ ಬಯಸಿ ಈವರೆಗೂ ಒಂದೇ ಒಂದು ಅರ್ಜಿಯನ್ನು ಹಾಕಿಲ್ಲ. ಹಾಗಿದ್ದರೂ ಅಧಿಕಾರಿಗಳು ಈ ಕೋರಿಕೆ ಮೇರೆಗೆ ಎಂದು ಆದೇಶ ಹೊರಡಿಸುವ ಜತೆಗೆ ಈ ಹಿಂದೆ ಇದ್ದ ಘಟಕಗಳನ್ನು ಬಿಟ್ಟು ಅದೇ ವಿಭಾಗದ ಬೇರೆ ಬೇರೆ ಘಟಕಗಳಿಗೆ ಮರು ವರ್ಗಾವಣೆ ಮಾಡುತ್ತಲೇ ಇದ್ದಾರೆ.
ಈ ಮೂಲಕ ಅಧಿಕಾರಿಗಳು ನೌಕರರನ್ನು ಇನ್ನಷ್ಟು ಹಿಂಸಿಸುವ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಇದರಿಂದ ನೌಕರರು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಯಾತನೆ ಅನುಭವಿಸಬೇಕು ಎಂಬ ಉದ್ದೇಶ ಹೊಂದಿರುವುದು ಇಲ್ಲಿ ಸ್ಪಷ್ಟವಾಗಿದೆ. ಇನ್ನೊಂದೆಡೆ ಸಚಿವರು ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆಯಂತೆ ಇನ್ನೂ ಏಕೆ ನಡೆದುಕೊಳ್ಳುತ್ತಿಲ್ಲ? ಅಧಿಕಾರಿಗಳ ಈ ನಡೆಗೆ ಏಕೆ ಇನ್ನೂ ಬ್ರೇಕ್ ಹಾಕಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.
ಇನ್ನಾದರೂ ಸಚಿವರು ತಾವು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದಂತೆ ನಡೆದುಕೊಂಡು ನೌಕರರ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕಿದೆ. ಜತೆಗೆ ಅಧಿಕಾರಿಗಳು ವರ್ಗಾವಣೆ ವಿಚಾರದಲ್ಲಿ ನಡೆದುಕೊಳ್ಳುತ್ತಿರುವುದನ್ನು ತಿದ್ದಿಕೊಳ್ಳಲು ತಿಳಿಸಬೇಕಿದೆ.
ಅಧಿಕಾರಿಗಳು ಕೂಡ ಇನ್ನಾದರೂ ಇಂಥ ದಾರಿತಪ್ಪಿಸುವ ಕೆಲಸವನ್ನು ಬಿಟ್ಟು ಸರ್ಕಾರ ಮತ್ತು ಸಾರಿಗೆ ಸಚಿವರ ಆದೇಶವನ್ನು ಪಾಲಿಸಬೇಕಿದೆ. ಈ ಮೂಲಕ ಸಚಿವರು ವರ್ಗಾವಣೆ, ಅಮಾನತು, ವಜಾಗೊಂಡ ನೌಕರರ ಸಂಬಂಧ ಆದೇಶಿಸಿರುವಂತೆ ನಡೆದುಕೊಂಡು ನಿಗಮಗಳ ಗೌರವವನ್ನು ಕಾಪಾಡಿಕೊಂಡು ಹೋಗಬೇಕಿದೆ.
ಸಾರಿಗೆ ನೌಕರರ ಬಗ್ಗೆ ನಿಖರ ಮಾಹಿತಿ ಜೋತೆಗೆ ನ್ಯಾಯಯುತವಾಗಿ ಬರವಣಿಗೆ ಬರೆದು ಸಾರಿಗೆ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗಿರುವ ವಿಜಯಪಥ ಕ್ಕೆ ಅನಂತ ಧನ್ಯವಾದಗಳು🙏