ಪಿರಿಯಾಪಟ್ಟಣ : ಸರಕಾರಕ್ಕೆ ಅಧಿಕೃತವಾಗಿ ತೆರಿಗೆ ಪಾವತಿಸ ಜೀವನ ನಡೆಸುತ್ತಿರುವ ಹಳದಿ ಬೋರ್ಡ್ ಟ್ಯಾಕ್ಸಿ ಚಾಲಕರಿಗೆ ಆಗುತ್ತಿರುವ ಅನ್ಯಾಯವನ್ನು ಅಧಿಕಾರಿಗಳು ತಡೆಗಟ್ಟಬೇಕು ಎಂದು ಕೆಟಿಡಿಒ ಖಾಸಗಿ ವಾಹನ ಚಾಲಕರ ಸಂಘದ ಅಧ್ಯಕ್ಷ ವಿನ್ಸಂಟ್ ಬಾಬು ತಿಳಿಸಿದರು.
ಪಟ್ಟಣದ ಭೋಲೆಭಾಲೆ ಷಾ ಖಾದ್ರಿ ದರ್ಗಾದ ಆವರಣದಲ್ಲಿ ಕರೆಯಲಾಗಿದ್ದ ತಾಲೂಕು ಖಾಸಗಿ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸರಕಾರಕ್ಕೆ ಅಧಿಕೃತವಾಗಿ ಸಾವಿರಾರು ರೂ ಟ್ಯಾಕ್ಸ್ ಕಟ್ಟಿ ವಾಹನ ಖರೀದಿಸಿ ಅದಕ್ಕೆ ಇನ್ಸುರೇನ್ಸ್ ಸೇರಿದಂತೆ ಎಲ್ಲ ರೀತಿಯ ಹಣವನ್ನು ಪಾವತಿ ಮಾಡುತ್ತಿರುವ ಅಧಿಕೃತ ಹಳದಿ ಬೋರ್ಡ್ ಟ್ಯಾಕ್ಸಿ ಚಾಲಕರಿಗೆ ಅನ್ಯಾಯವಾಗುತ್ತಿದೆ.
ಖಾಸಗಿಗೆಂದು ಸರಕಾರಕ್ಕೆ ತೆರಿಗೆ ವಂಚನೆ ಮಾಡುವ ದೃಷ್ಟಿಯಿಂದ ವಾಹನ ಖರೀದಿ ಬಾಡಿಗೆಗೆ ಉಪಯೋಗಿಸಲಾಗುತ್ತಿದೆ. ಇದರಿಂದ ನಿಷ್ಠಾವಂತ ತೆರಿಗೆ ಪಾವತಿಸುವ ಟ್ಯಾಕ್ಸಿ ಚಾಲಕರ ಕುಟುಂಬಕ್ಕೆ ಅನ್ಯಾಯವಾಗುತ್ತಿದ್ದು ಇದರಿಂದ ಮಾಲೀಕರು ಚಾಲಕರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ.
ಅನಧಿಕೃತವಾಗಿ ಯಾವುದೆ ವೈಟ್‌ಬೋರ್ಡ್ ಟ್ಯಾಕ್ಸ್ಗಳು ಬಾಡಿಗೆಗೆ ಮುಂದಾಗುತ್ತಿದ್ದರು ಪೊಲೀಸ್ ಇಲಾಖೆ, ಆರ್.ಟಿ.ಓ ಯಾವ ಇಲಾಖೆಗಳು ಇದನ್ನು ಪ್ರಶ್ನಿಸುತ್ತಿಲ್ಲ. ವೈಟ್‌ಬೋರ್ಡ್ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ಪ್ರಯಾಣಿಗರು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಯಾವುದೆ ಪರಿಹಾರ ಪಡೆಯದಂತಾಗುತ್ತದೆ.
ರೂ. 100-200 ಕಡಿಮೆ ಬಾಡಿಗೆ ಬರುತ್ತಾರೆ ಎಂದು ಹೋಗಿ ಪ್ರಯಾಣಿಕರು ವಂಚನೆಗೆ ಒಳಗಾಗುತ್ತಿದ್ದಾರೆ. ಇದರಿಂದ ಇಡೀ ವ್ಯವಸ್ಥೆ ಹಾಳಾಗುತ್ತಿದೆ. ಈ ಬಗ್ಗೆ ಸರಕಾರದ ಗಮನಸೆಳೆಯಲ್ಲಿ ಸಂಘಟನೆ ರಚನೆ ಮಾಡಿಕೊಂಡು ಇಡೀ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಸರ್ಕಲ್ ಇನ್ಸ್ಪೆಕ್ಟರ್‌ಗಳಿಗೆ ತಾಲೂಕು ಸಂಘದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಕೊಡಗು ಜಿಲ್ಲೆಯ ಗೌರವಾಧ್ಯಕ್ಷ ಎಂ.ಎ.ರಫೀಕ್, ಕಾರ್ಯದರ್ಶಿ ರಖೀಬ್, ಸಹಕಾರ್ಯದರ್ಶಿ ಎಚ್.ಎನ್.ಕಿರಣ್, ಕುಶಾಲನಗರದ ಗೌರವಾಧ್ಯಕ್ಷ ಪ್ರಕಾಶ್‌ಪುಟ್ಟ, ಖಜಾಂಜಿ ಅಪ್ಪುಶ್ರೀನಿವಾಸ್, ಸೇರಿದಂತೆ ಪಿರಿಯಾಪಟ್ಟಣದ ಕೃಷ್ಣೇಗೌಡ, ಬೇರನಾಯ್ಕ ಸೇರಿದಂತೆ ಹಳದಿ ಬೋಡ್ ಟ್ಯಾಕ್ಸಿಚಾಲಕರ ಸಂಘದ ಸದಸ್ಯರು ಹಾಜರಿದ್ದರು.