ಬೆಂಗಳೂರು:ಆರನೇ ವೇತನ ಆಯೋಗ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಏಪ್ರಿಲ್ನಲ್ಲಿ ಸಾರಿಗೆ ನೌಕರರು ನಡೆಸಿದ ಅನಿರ್ದಿಷ್ಟಾವಧಿ ಮುಷ್ಕರದ ವೇಳೆ ಸಾವಿರಾರು ನೌಕರರನ್ನು ಏಕಾಏಕಿ ವಜಾಗೊಳಿಸಿದ್ದು ಆ ವಜಾ ಆದೇಶ ವಾಪಸ್ ಪಡೆಯುವಂತೆ ಇಂದು (ಮಂಗಳವಾರ) ವಜಾಗೊಂಡ ನೌಕರರು ಸೇರಿ ಸಾವಿರಾರು ನೌಕರರು ಸಚಿವರ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಈಗಾಗಲೇ ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಬಳಿ ಸಾರಿಗೆಯ ನೌಕರರು ಬೆಳಗ್ಗೆ 8.30 ಗಂಟೆಯಿಂದ ಜಮಾವಣೆಗೊಂಡಿದ್ದು, ಸಚಿವರು ಬಂದು ಮನವಿ ಸ್ವೀಕರಿಸುವ ವರೆಗೂ ನಾವು ಮೌನಾಚರಣೆ ಮಾಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಮುಷ್ಕರದ ವೇಳೆ ವಜಾ ಮಾಡಿರುವ ನೌಕರರನ್ನು 10ದಿನದ ಒಳಗಾಗಿ ಕರ್ತವ್ಯಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಸಚಿವರಾದ ನೀವು ತಿಳಿಸಿದ್ದೀರಿ ಆದರೆ, ಇನ್ನೂ ಕರ್ತವ್ಯಕ್ಕೆ ನೌಕರರನ್ನು ತೆಗೆದುಕೊಂಡಿಲ್ಲ. ಹೀಗಾಗಿ ವಜಾಗೊಂಡಿರುವ ನೌಕರರನ್ನು ವಜಾ ಆದೇಶ ಹೊರಡಿಸಿದ 6ತಿಂಗಳ ಒಳಗಾಗಿ ಮತ್ತೆ ಅವರ ಪ್ರಕರಣವನ್ನು ವಾಪಸ್ ಪಡೆಯದಿದ್ದರೆ ಕಾನೂನಿನಡಿ ಸಮಸ್ಯೆಯಾಗುತ್ತದೆ. ಆದ್ದರಿಂದ ದಯಮಾಡಿ ಕೂಡಲೇ ಕರ್ತವ್ಯಕ್ಕೆ ತೆಗೆದುಕೊಳ್ಳಬೇಕು ಎಂದು ನೌಕರರು ಮನವಿ ಮಾಡುತ್ತಿದ್ದಾರೆ.
ಇನ್ನು ಸಚಿವ ಶ್ರೀರಾಮುಲು ಅವರು ಕೊಟ್ಟ ಭರವಸೆ ಇನ್ನೂ ಈಡೇರದ ಕಾರಣ ನೌಕರರು ಇಂದು ಹಲವಾರು ಸಮಸ್ಯೆಗೆ ಸಿಲುಕುತ್ತಿದ್ದಾರೆ ಆದ್ದರಿಂದ ನೀವು ನೌಕರರ ಸಮಸ್ಯೆಗೆ ಸ್ಪಂದಿಸಬೇಕು ಎಂದು ವಜಾಗೊಂಡ ನೌಕರರ ಪರವಾಗಿ ಕೂಟದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಮುಷ್ಕರದ ವೇಳೆ ವಜಾಗೊಂಡಿರುವ ಸುಮಾರು 2,156 ಸಾರಿಗೆ ನೌಕರರು ಸರ್ಕಾರ ಮತ್ತು ಸಾರಿಗೆ ನಿಗಮಗಳ ವಿಳಂಬ ದೋರಣೆಯಿಂದ ತ್ರಿಶಂಕುಸ್ಥಿತಿಯಲ್ಲಿದ್ದು, ವಿಧಿ ಇಲ್ಲದೆ ಲೇಬರ್ ಕೋರ್ಟ್ ಕದತಟ್ಟುವಂತಾಗಿದೆ. ಹೀಗಾಗಿ ತಾವು ಅಕ್ಟೋಬರ್ 8ರೊಳಗೆ ವಜಾ ಅದೇಶವನ್ನು ಹಿಂಪಡೆಯಬೇಕು ಎಂದು ನೌಕರರು ಮನವಿ ಸಲ್ಲಿಸಲು ಇಂದು ಮೌರ್ಯ ವೃತ್ತದ ಬಳಿ ಸೇರಿದ್ದಾರೆ.
ಇನ್ನು ಇಲ್ಲಿಯವರೆಗೂ ಸಚಿವರು ಮತ್ತು ಸರ್ಕಾರ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಂಬಿದ್ದ ವಜಾಗೊಂಡ ನೌಕರರು ನಿರಾಸೆಗೊಳ್ಳುವ ರೀತಿಯ ಬೆಳೋವಣಿಗೆ ನಡೆಯುತ್ತಿರುವುದರಿಂದ ಖಿನ್ನತೆಗೆ ಜಾರುತ್ತಿದ್ದಾರೆ. ಆದ್ದರಿಂದ ಸಚಿವರು ನೌಕರರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಭರವಸೆ ಕೊಡುವುದನ್ನು ಬಿಟ್ಟು ಬೇಡಿಕೆ ಈಡೇರುವತ್ತ ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಇಂದು ಮೌನಾಚರಣೆ ಮೂಲಕ ಸಚಿವರಿಗೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಜತೆಗೆ ವಜಾ ಆದೇಶವನ್ನು ವಾಪಸ್ ಪಡೆಯುವಂತೆ ಮನವಿ ಪತ್ರವನ್ನು ವಜಾ ಗೊಂಡಿರುವ ಎಲ್ಲ ಸಚಿವರು ವೈಯಕ್ತಿವಾಗಿ ಸಲ್ಲಿಸಲು ನಿರ್ಧರಿಸಿದ್ದು, ಸಚಿವರ ಬರುವಿಕೆಗಾಗಿ ಕಾಯುತ್ತಿದ್ದಾರೆ.