ಹಾಸನ: ಕೈಲಾಗದವನು ಮೈ ಪರಚಿಕೊಂಡ ಹಾಗೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ವೈಯಕ್ತಿಕ ನಿಂದನೆಯಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆ ವಿಚಾರವನ್ನು ಬಿಟ್ಟಾಕಿ ನನ್ನ ಬಗ್ಗೆ ಏನು ದಾಖಲೆ ಬಿಚ್ಚಿಡುತ್ತಾರೆ. ಅದನ್ನು ಮೊದಲು ಬಿಚ್ಚಿಡುವುದಕ್ಕೆ ಹೇಳಿ. ಅವರ ಬಗ್ಗೆ ಚರ್ಚೆ ಮಾಡುವುದು ಅನಾವಶ್ಯಕ ಎಂದು ಹೇಳಿದರು.
ಕೆಸರ ಮೇಲೆ ಕಲ್ಲು ಎಸೆದರೆ ಯಾರಿಗೆ ಕೊಚ್ಚೆ ಹಾರುತ್ತೆ ಹೇಳಿ. ಅವರ ಹುಟ್ಟು ಗುಣ ಅದು ನಾವೇನು ಮಾಡುವುದಕ್ಕೆ ಆಗುವುದಿಲ್ಲ ಎಂದು ಟೀಕಿಸಿದರು. ಗುಬ್ಬಿಯಲ್ಲಿ ಪರ್ಯಾಯ ನಾಯಕನ ಸಮಾವೇಶ ವಿಚಾರವಾಗಿ ಮಾತನಾಡಿದ ಅವರು, ಗುಬ್ಬಿ ವಿಧಾನಸಭಾ ಕ್ಷೇತ್ರ ಒಂದೇ ಅಲ್ಲ, ರಾಜ್ಯದಲ್ಲಿ ಮುಂದಿನ 2023ಕ್ಕೆ ಸ್ವತಂತ್ರವಾದ ರೈತಪರವಾದ ಸರ್ಕಾರ ತರಬೇಕಿದೆ. ಈ ಹಿನ್ನೆಲೆಯಲ್ಲಿ ಹೋರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಜೆಡಿಎಸ್ ಗೆ ಜನ ಬುದ್ಧಿ ಕಲಿಸುತ್ತಾರೆ ಎಂಬ ಶಾಸಕ ಗುಬ್ಬಿ ಶ್ರೀನಿವಾಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀನಿವಾಸ್ ಅವರು ನಮ್ಮ ಪಕ್ಷದಲ್ಲಿ ಕಳೆದ ಮೂರು ವರ್ಷದಿಂದ ಯಾವುದೇ ಚಟುವಟಿಕೆಯಲ್ಲಿ ಇಲ್ಲ. ವೈಯಕ್ತಿಕ ರೀತಿಯಲ್ಲಿ ಅವರು ಕೆಲಸ ಮಾಡಿಕೊಂಡು ಹೋಗಿದ್ದಾರೆ. ಬಹಳ ಜನ ನಮ್ಮ ಪಕ್ಷಕ್ಕೆ ಬುದ್ಧಿ ಕಲಿಸಿ ಹೋಗಾಗಿದೆ. ಈ ರೀತಿ ಹೇಳಿಕೆ ನೀಡುವುದು ಅವರ ವೈಯಕ್ತಿಕ ಹಿನ್ನೆಲೆ ತೋರಿಸುತ್ತೆ ಎಂದು ಕಿಡಿಕಾರಿದರು.
ಬೆಂಗಳೂರಿನ ಶಿವರಾಮಕಾರಂತ ಬಡಾವಣೆ ಕಟ್ಟಡ ಒಡೆಯೋ ವಿಚಾರವಾಗಿ ಮಾತನಾಡಿ ಅವರು, ಈ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿಗಳಿಗೆ ಎರಡು-ಮೂರು ಬಾರಿ ಮನವಿ ಮಾಡಿದ್ದೆ. ಅಲ್ಲಿನ ನಿವಾಸಿಗಳನ್ನು ಕರೆದು ಸಭೆ ಮಾಡಿ ನಂತರ ತೀರ್ಮಾನ ಕೈಗೊಳ್ಳುವಂತೆ ಸಹ ಹೇಳಿದ್ದೆ. ಆದರೆ ಸಮಯ ಕೊಡಲಿಲ್ಲ. ಆದರೆ ಈಗ ಏಕಾಏಕಿ ಮನೆಗಳನ್ನು ಒಡೆಯಲು ಶುರು ಮಾಡಿದ್ದಾರೆ ಎಂದರು.
ಈ ತೆರವು ನಿಲ್ಲಿಸಲು ಹೋದಾಗ ನಮ್ಮ ಪಕ್ಷದ ಶಾಸಕರನ್ನು ಅರೆಸ್ಟ್ ಮಾಡಿರುವುದು ಗಮನಕ್ಕೆ ಬಂದಿದೆ. ಕೋಟ್ಯಂತರ ರೂ. ಖರ್ಚು ಮಾಡಿ ಮನೆ ಕಟ್ಟಿರುತ್ತಾರೆ. ಬಡಾವಣೆಯನ್ನು ನಿರ್ಮಾಣ ಮಾಡಬೇಕಾದರೆ ಪ್ರಾಥಮಿಕ ಭೂಸ್ವಾಧೀನ ಪ್ರಕ್ರಿಯೆ ನಡೆದಿರುತ್ತದೆ. ನೋಟಿಫಿಕೇಶನ್ ಆದಮೇಲೆ ಮತ್ತೆ ಡಿನೋಟಿಫಿಕೇಶನ್ ಮಾಡಿದ್ದಾರೆ. ಮತ್ತೆ ಇವರ ಸರ್ಕಾರದ ಅಧಿಕಾರಿಗಳು ಎನ್ ಒಸಿ ನೀಡಿ ಹಣ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಅಧಿಕಾರಿಗಳು ನ್ಯಾಯಾಲಯಕ್ಕೂ ಸಹ ಸರಿಯಾದ ಮಾಹಿತಿ ನೀಡದೆ ಅನ್ಯಾಯ ಮಾಡಿದ್ದಾರೆ. ಈ ಸರ್ಕಾರಕ್ಕೆ ಏನಾದರೂ ಜವಾಬ್ದಾರಿ ಇದ್ಯೆ ಎಂದು ಕಿಡಿಕಾರಿದ ಅವರು, ಕೂಡಲೇ ಈ ಕುರಿತು ಚರ್ಚೆ ಮಾಡಿ ಕಾನೂನು ರೀತಿಯಲ್ಲಿ ಮನೆ ಕಳೆದುಕೊಂಡವರಿಗೆ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.