ಬೆಂಗಳೂರು: ಆಟೋ ರಿಕ್ಷಾಗಳಿಗೆ ಬಳಸುವ ಎಲ್‌ಪಿಜಿ ಬೆಲೆಯು ಕಳೆದ ಒಂದು ವರ್ಷದಲ್ಲಿ ಸುಮಾರು ಎರಡು ಪಟ್ಟು ಏರಿಕೆಯಾಗಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿ ನೇತೃತ್ವದ ಆಟೋ ಚಾಲಕರ ಘಟಕವು ನ. 9ರಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಆಮ್ ಆದ್ಮಿ ಪಾರ್ಟಿಯ ಆಟೋ ಘಟಕದ ರಾಜ್ಯಾಧ್ಯಕ್ಷ ಅಯೂಬ್ ಖಾನ್ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಪದೇಪದೆ ಎಲ್‌ಪಿಜಿ ಬೆಲೆ ಏರಿಕೆ ಮಾಡುವ ಕೇಂದ್ರ ಸರ್ಕಾರವು ಆಟೋ ಚಾಲಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಲೀಟರ್‌ಗೆ 38 ರೂಪಾಯಿಯಿದ್ದ ಎಲ್‌ಪಿಜಿ ಬೆಲೆ ಈಗ 66 ರೂಪಾಯಿ ತಲುಪಿದೆ. ಅಂದರೆ, ಕೇವಲ ಒಂದು ವರ್ಷದಲ್ಲಿ 28 ರೂಪಾಯಿ ಏರಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಳೆದ ವಾರ ಒಂದೇ ಸಲ 6 ರೂಪಾಯಿ ಹೆಚ್ಚಿಸಲಾಗಿದೆ. ಪ್ರಯಾಣಿಕರು ನೀಡುವ ಹಣವು ಎಲ್‌ಪಿಜಿಗೇ ಖರ್ಚಾಗುತ್ತಿದ್ದು, ಆದಾಯವಿಲ್ಲದೇ ಚಾಲಕರ ಬದುಕು ದುಸ್ತರವಾಗಿದೆ. ಆಟೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್‌ಪಿಜಿ ಪೂರೈಸುವ ಕಂಪನಿಗಳ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ. ಈ ಸರ್ಕಾರಕ್ಕೆ ಆಟೋ ಚಾಲಕರು ಹಾಗೂ ಪ್ರಯಾಣಿಕರ ಹಿತ ಬೇಕಾಗಿಲ್ಲ. ಉದ್ಯಮಿಗಳು ಕೊಡುವ ಹಣದ ಆಸೆಗಾಗಿ ಸಾಮಾನ್ಯ ಜನರ ಜೀವನವನ್ನು ಶೋಚನೀಯ ಸ್ಥಿತಿಗೆ ತಳ್ಳಲಾಗುತ್ತಿದೆ. ಉಳ್ಳವರ ಪರವಾಗಿರುವ ಈ ಸರ್ಕಾರವನ್ನು ಆಡಳಿತದಿಂದ ಕಿತ್ತೊಗೆಯುವವರೆಗೂ ಜನಸಾಮಾನ್ಯರಿಗೆ ನೆಮ್ಮದಿ ಎಂಬುದಿಲ್ಲ” ಎಂದು ಅಯೂಬ್ ಖಾನ್ ಕಿಡಿ ಕಾರಿದರು.
ಬೆಂಗಳೂರು ನಗರ ಎಎಪಿ ಆಟೋ ಚಾಲಕರ ಘಟಕದ ಅಧ್ಯಕ್ಷ ವೆಂಕಟಗೌಡ ಮಾತನಾಡಿ, ಎಲ್‌ಪಿಜಿ ಬೆಲೆ ಏರಿಕೆ ಖಂಡಿಸಿ ನ. 9ರ ಮಂಗಳವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಟೋ ಚಾಲಕರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದಿನಿಂದ ಆಟೋ ಚಾಲಕರು ಕಪ್ಪು ಪಟ್ಟಿ ಧರಿಸಿ ಚಾಲನೆ ಮಾಡುವ ಮೂಲಕ ಜನವಿರೋಧಿ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲಿದ್ದಾರೆ. ಶ್ರೀಸಾಮಾನ್ಯರಿಗೆ ಕಂಟಕವಾಗಿರುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಬೆಂಗಳೂರು ನಗರದ ಎಎಪಿ ಆಟೋ ಚಾಲಕರ ಘಟಕದ ಪ್ರಧಾನ ಕಾರ್ಯದರ್ಶಿ ಉಸ್ಮಾನ್, ಹಾಗೂ ಆತೀಕ್ ಅಹಮದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.