ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಎಂಎಸ್ಆರ್ಟಿಸಿ ) ನೌಕರರು ನಿಗಮವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸಲು ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಬಿಜೆಪಿ ಬೆಂಬಲಿಸಿದ್ದು, ನೌಕರರ ಬೇಡಿಕೆ ಈಡೇರಿಸದಿದ್ದರೆ ಎಂಡಿ ಕಚೇರಿಗೆ ಬೀಗ ಜಡಿಯುವ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಕಳೆದ ಅಕ್ಟೋಬರ್ 28ರಿಂದಲೂ ನೌಕರರು ಮುಷ್ಕರ ಹೂಡಿದ್ದರೂ ಸರ್ಕಾರ ಅವರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಮುಂದಾಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರು ನೌಕರರ ಬೇಡಿಕೆ ನ್ಯಾಯಯುತವಾಗಿದ್ದು ಅವುಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ಕೂಡ ಅವರೊಂದಿಗೆ ಪ್ರತಿ ಡಿಪೋಗಳಲ್ಲೂ ಧರಣಿ ಆರಂಭಿಸಬೇಕಾಗುತ್ತದೆ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಬೀಗ ಜಡಿದು ಬೇಡಿಕೆ ಈಡೇರಿಸುವವರೆಗೂ ಹೋರಾಟ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಎಂಎಸ್ಆರ್ಟಿಸಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ರಚಿಸಲಾದ ಸಮಿತಿ ಮತ್ತು ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಅವರಿಗೆ ಕನಿಷ್ಟ್ ಶ್ರೇಣಿ ಎಸ್ಟಿ ಕರ್ಮಾಚಾರಿ ಸಂಘದ ಅಧ್ಯಕ್ಷ ಅಜಯ್ ಕುಮಾರ್ ಗುಜಾರ್ 365 ಪುಟಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಿದ್ದಾರೆ.
ಯೂನಿಯನ್ಗಳ ವಿರುದ್ಧ ಎಂಎಸ್ಆರ್ಟಿಸಿ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಒಕ್ಕೂಟಗಳ ಪರವಾಗಿ ವಕೀಲರಾದ ಗುಣರತ್ನ ಸದಾವರ್ತೆ ಅವರು ಬಾಂಬೆ ಹೈಕೋರ್ಟ್ಗೆ ಸಲ್ಲಿಸಿದ್ದು, ಸಂಘದ ಪ್ರತಿನಿಧಿಗಳು ಸಮಿತಿಯ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದ್ದರು.
ಒಕ್ಕೂಟದ ಪ್ರತಿನಿಧಿ ಲಿಖಿತ ಮನವಿ ಪತ್ರ ಸಲ್ಲಿಸುವ ಮೂಲಕ ಪ್ರಾತಿನಿಧ್ಯ ನೀಡಲಾಗುವುದು ಎಂದು ಸದಾವಾರ್ತೆ ತಿಳಿಸಿದರು. ನಂತರ ಗುಜಾರ್ ಅವರು ಸಮಿತಿಯ ಮುಖ್ಯಸ್ಥರಾದ ಕುಂಟೆ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಮೂಲಗಳ ಪ್ರಕಾರ, ಮನವಿ ಪತ್ರವು MSRTC ಅನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವ ಬೇಡಿಕೆಗಳು ಮತ್ತು ಸಲಹೆಗಳನ್ನು ಒಳಗೊಂಡಿದೆ.
ಇನ್ನು ಮುಷ್ಕರದ ವೇಳೆ ಮೃತಪಟ್ಟಿರುವ ಮತ್ತುಆತ್ಮಹತ್ಯೆ ಮಾಡಿಕೊಂಡಿರುವ ಎಂಎಸ್ಆರ್ಟಿಸಿ ನೌಕರರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಿಬ್ಬಂದಿಗಳ ಒರವಾಗಿ ಮೃತರ ಅಂಕಿ ಅಂಶಗಳ ಸಹಿತ ಸರ್ಕಾರದ ಗಮನಕ್ಕೆ ಗುಜಾರ್ ತಂದಿದ್ದಾರೆ ಎಂದು ಕುಂಟೆ ತಿಳಿಸಿದ್ದಾರೆ.
ಇನ್ನು ಇಂದೂ ಕೂಡ ಮುಷ್ಕರ ಮುಂದುವರಿದ್ದು ಸಾರ್ವಜನಿಕರು ಬಸ್ ಸೇವೆ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಸರ್ಕಾರ ನೌಕರರ ಬೇಡಿಕೆ ಸ್ಪಂದಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.