ಮುಂಬೈ: ರಾಜ್ಯ ಸರ್ಕಾರದೊಂದಿಗೆ ಎಂಎಸ್ಆರ್ಟಿಸಿ ವಿಲೀನಗೊಳಿಸಬೇಕು ಎಂದು ಆಗ್ರಹಿಸಿ ಕಳೆದ ಅಕ್ಟೋಬರ್ 28ರಿಂದ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 24ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಉಗ್ರರೂಪ ತಳೆಯಿತು.
ರಾಜ್ಯದ ವಿವಿಧ ಡಿಪೋಗಳಿಂದ ಶನಿವಾರ ರಸ್ತೆಗಿಳಿದಿದ್ದ ಬಸ್ಗಳನ್ನು ತಡೆದ ನೌಕರರ ಸಂಘಟನೆಗಳ ಮುಖಂಡರು ಬಸ್ಗಳನ್ನು ವಾಪಸ್ ತೆಗೆದುಕೊಂಡು ಡಿಪೋಗಳಿಗೆ ಹಾಕುವಂತೆ ತಾಕೀತು ಮಾಡಿದರು. ಕರ್ತವ್ಯನಿರತ ನೌಕರರು ಡಿಪೋಗಳಿಗೆ ತೆಗೆದುಕೊಂಡು ಹೋದರು.
ಒಟ್ಟಾರೆ 3 ಸಾವಿರಕ್ಕೂ ಹೆಚ್ಚು ಮಂದಿ ನೌಕರರನ್ನು ಅಮಾನತು ಮಾಡಿದ್ದು, 300ಕ್ಕೂ ಹೆಚ್ಚು ನೌಕರರನ್ನು ಈವರೆಗೆ ವಜಾ ಮಾಡಲಾಗಿದೆ. ಈ ನಡುವೆ 35ಕ್ಕೂ ಹೆಚ್ಚು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಸರ್ಕಾರ ನೌಕರರ ಬೇಡಿಕೆಗಳಿಗೆ ಬಗ್ಗುತ್ತಿಲ್ಲ ಎಂದು ಮುಷ್ಕರ ನಿರತ ನೌಕರರು ಆಕ್ರೋಶ ಹೊರಹಾಕಿದ್ದಾರೆ.
ಮುಷ್ಕರ ನಿರತ ನೌಕರರಿಗೆ ಮಹಾರಾಷ್ಟ ಬಿಜೆಪಿಯ ಎಲ್ಲ ಮುಖಂಡರು ಬೆಂಬಲ ನೀಡುತ್ತಿದ್ದು, ಹೋರಾಟದಲ್ಲಿ ಭಾಗವಹಿಸುವ ಮೂಲಕ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ಇನ್ನು ದಿನಗೂಲಿ ಸಾರಿಗೆ ನೌಕರರು ಬಸ್ಗಳನ್ನು ಓಡಿಸುತ್ತಿದ್ದು, ಅವರಿಗೆ ಮುಷ್ಕರ ನಿರತ ನೌಕರರು ಎಚ್ಚರಿಕೆ ನೀಡಿದ್ದಾರೆ. ನೀವು ಈ ರೀತಿ ಬಸ್ಗಳನ್ನು ಓಡಿಸಿದರೆ ನಮ್ಮ ಹೋರಾಟ ವಿಫಲವಾಗುತ್ತದೆ. ಹಾಗಾಗಿ ನೀವು ಹೇಗೆ ಡಿಪೋಗಳಿಂದ ಬಸ್ತೆಗೆದಕೊಂಡು ಬಂದಿದ್ದೀರೋ ಹಾಗೆ ವಾಪಸ್ ಹೋಗಿ ಎಂದು ಕಳುಹಿಸಿದ್ದಾರೆ.
ಒಂದೆಡೆ ನೌಕರರ ಅಮಾನತು, ವಜಾ ಮಾಡುತ್ತಿರುವುದಕ್ಕೆ ಸಿಟ್ಟಿಗೆದ್ದಿರುವ ನೌಕರರ ಪರ ಒಕ್ಕೂಟಗಳ ಪದಾಧಿಕಾರಿಗಳು ಸಾವಿರಾರು ನೌಕರರೊಂದಿಗೆ ಬೀದಿಗಿಳಿದು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಇದರಿಂದ ಕಕ್ಕಾಬಿಕ್ಕಿಯಾಗಿರುವ ಮಹಾರಾಷ್ಟ್ರ ಸರ್ಕಾರ ಏನು ಮಾಡುವುದು ಎಂಬ ಚರ್ಚೆಯಲ್ಲಿ ತೊಡಗಿದೆ.
ಇನ್ನು ಮಾಡು ಇಲ್ಲವೇ ಮಡಿ ಎಂಬಂತೆ ಹೋರಾಟ ಮಾಡುತ್ತಿರುವ ಎಂಎಸ್ಆರ್ಟಿಸಿ ನೌಕರರು ಶತಾಯಗತಾಯ ರಾಜ್ಯ ಸರ್ಕಾರದೊಂದಿಗೆ ನಿಗಮವನ್ನು ವಿಲೀನ ಮಾಡೇ ತಿರುತ್ತೇವೆ ಎಂದು ಪಟ್ಟು ಬಿಡದೆ ಕಳೆದ 24 ದಿನಗಳಿಂದ ಮುಷ್ಕರ ಮಾಡುತ್ತಿದ್ದಾರೆ.
ಮುಷ್ಕರದಿಂದ ನಿಗಮಕ್ಕೆ ನಿತ್ಯ 15-20 ಕೋಟಿ ರೂ.ಗಳು ನಷ್ಟವಾಗುತ್ತದೆ. ಆದರೂ ಸರ್ಕಾರ ಅವರ ಬೇಡಿಕೆ ಈಡೇರಿಸಲು ಒಪ್ಪುತ್ತಿಲ್ಲ. ಸರ್ಕಾರದ ಈ ನಿಲುವಿನಿಂದ ನಿಗಮಕ್ಕೆ ಇನ್ನಷ್ಟು ಆರ್ಥಿಕ ಹೊರೆ ಬೀಳಲಿದೆ.
ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಇಲ್ಲಿನ ರಾಜ್ಯ ರಸ್ತೆ ಸಾರಿಗೆ ನೌಕರರು ಕೂಡ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಒತ್ತಾಯಿಸಿ ಏಪ್ರಿಲ್ನಲ್ಲಿ ನಡೆಸಿದ ಮುಷ್ಕರವನ್ನು ಹತ್ತಿಕ್ಕಿತ್ತು. ಈ ವೇಳೆ ಸಾವಿರಾರು ನೌಕರರನ್ನು ವಜಾ, ಅಮಾನತು, ವರ್ಗಾವಣೆ ಮಾಡಿದ್ದು, ಇನ್ನೂ ನೌಕರರಿಗೆ ಕಿರುಕುಳ ಕೊಡುತ್ತಲೇ ಇದೆ. ಆದರೆ, ಮಹಾರಷ್ಟ್ರದಲ್ಲಿ ಬಿಜೆಪಿ ಮುಖಂಡರೆ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿ ಸರ್ಕಾರದೊಂದಿಗೆ ನಿಗಮವನ್ನು ವಿಲೀನ ಮಾಡುವಂತೆ ಆಗ್ರಹಿಸುತ್ತಿದ್ದಾರೆ.
ಇದನ್ನು ಗಮನಿಸಿದರೆ ರಾಷ್ಟ್ರೀಯ ಪಕ್ಷವಾದ ಬಿಜೆಪಿಯು ಇಬ್ಬಗೆಯ ನೀತಿ ಅನುಸರಿಸುತ್ತಿರುವುದು ಸ್ಪಷ್ವವಾಗಿ ಕಂಡು ಬರುತ್ತಿದೆ. ಇನ್ನು ಇದನ್ನು ವೋಟ್ ರಾಜಕೀಯ ಎನ್ನಬೇಕೋ ಅಥವಾ ದೇಶದ ರಾಜ್ಯದ ಜನರ ಹಿತಕ್ಕಾಗಿ ಈ ಪಕ್ಷದ ನಿಲುವು ಇದೆಯೋ ಎನ್ನಬೇಕೋ? ಇದನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಮತ್ತು ಜನರೇ ತೀರ್ಮಾನ ಮಾಡಿಕೊಳ್ಳಬೇಕಿದೆ.