ಮೈಸೂರು: ಸಂಸತ್ತಿನಲ್ಲಿ ರೈತವಿರೋಧಿ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ದಿನವನ್ನು ರೈತರ ವಿಜಯ ದಿನವನ್ನಾಗಿ ಆಚರಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಮಾಲವಿಕ ಗುಬ್ಬಿವಾಣಿ ಹೇಳಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು “ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ನಿರ್ಧಾರವು ರೈತರಿಗೆ ಸಂದ ದೊಡ್ಡ ಗೆಲುವು. ನಮಗಾಗಿ ಕಠಿಣ ಹೋರಾಟ ಮಾಡಿದ ಎಲ್ಲ ರೈತರಿಗೆ ಪ್ರತಿಯೊಬ್ಬ ಭಾರತೀಯನೂ ಧನ್ಯವಾದ ಹೇಳಬೇಕು. ರೈತರ ಹೋರಾಟ ಹಾಗೂ ತ್ಯಾಗವು ಸದಾ ಸ್ಮರಣೆಯಲ್ಲಿರುತ್ತದೆ ಎಂದು ಹೇಳಿದರು.
700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರು ಅಲುಗಾಡಿಸಲಿಲ್ಲ. ಬದಲಾಗಿ, ಸದ್ಯದಲ್ಲೇ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಸೋಲುವ ಮುನ್ಸೂಚನೆಯು ಈ ಮಹತ್ವದ ನಿರ್ಧಾರಕ್ಕೆ ಕಾರಣವಾಗಿದೆ.
ಇಂದಿನ ಘೋಷಣೆಯಲ್ಲೂ ಕೂಡ ಪ್ರಧಾನಿ ನರೇಂದ್ರ ಮೋದಿಯವರು ರೈತರು ಜೀವ ಕಳೆದುಕೊಂಡಿರುವುದರ ಬಗ್ಗೆ ಪ್ರಸ್ತಾಪಿಸಿಲ್ಲ. ಚುನಾವಣೆ ಹಾಗೂ ಮತಗಳು ಮಾತ್ರ ಆಡಳಿತ ಪಕ್ಷಕ್ಕೆ ಮುಖ್ಯವೆಂದು ಇದರಿಂದಲೇ ತಿಳಿಯುತ್ತದೆ ಎಂದರು.
ರೈತರಿಗೆ ಸಿಕ್ಕ ಜಯವು ಶಾಶ್ವತವಾಗಿ ನೆನಪಿನಲ್ಲಿರಬೇಕು. ಇದು ಸಾಧ್ಯವಾಗಬೇಕಾದರೆ, ಸಂಸತ್ತಿನಲ್ಲಿ ಕಾಯಿದೆಗಳ ತಿದ್ದುಪಡಿಯನ್ನು ಹಿಂಪಡೆದ ದಿನವನ್ನು “ರೈತರ ವಿಜಯ ದಿನ” ಎಂದು ಆಚರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಯೊಬ್ಬ ಭಾರತೀಯ ಪ್ರಜೆಯ ಹಕ್ಕುಗಳ ರಕ್ಷಣೆಗಾಗಿ ರೈತರು ಹೋರಾಡಿದನ್ನು, ಕಷ್ಟಪಟ್ಟಿದ್ದನ್ನು ಹಾಗೂ ತ್ಯಾಗ ಮಾಡಿದ್ದನ್ನು ಆ ದಿನದಂದು ಸ್ಮರಿಸಿ, ಕೃತಜ್ಞತೆ ಸಲ್ಲಿಸಬೇಕು. ಪ್ರತಿಭಟನೆಯಲ್ಲಿ ಹುತಾತ್ಮರಾದ ರೈತರಿಗೆ ಪ್ರತಿವರ್ಷ ರೈತ ವಿಜಯ ದಿನದಂದು ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಮಾಲವಿಕ ಆಗ್ರಹಿಸಿದರು.