ಮೈಸೂರು: ಅನ್ಯ ಪಕ್ಷಗಳ ಸರ್ಕಾರಗಳು ಜನರ ಮೂಗಿಗೆ ತುಪ್ಪ ಸವರುವುದರಲ್ಲೇ ನಿರತವಾಗಿದ್ದರೆ, ದೆಹಲಿಯ ಕೇಜ್ರಿವಾಲ್ ಸರ್ಕಾರವು ಅಸಾಧಾರಣ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ದೇಶಾದ್ಯಂತ ಆಮ್ ಆದ್ಮಿ ಪಾರ್ಟಿ ವಿಸ್ತಾರಕ್ಕೆ ಭದ್ರ ಬುನಾದಿ ಹಾಕಿದೆ ಎಂದು ಪಕ್ಷದ ಮೈಸೂರು ಜಿಲ್ಲಾಧ್ಯಕ್ಷರಾದ ಮಾಲವಿಕ ಗುಬ್ಬಿವಾಣಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಹತ್ತನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಕ್ಷದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಗುಬ್ಬಿವಾಣಿ, ಜನಸಾಮಾನ್ಯರ ಭಾವನೆಗೆಳಿಗೆ ಸ್ಪಂದಿಸುವ ಸರ್ಕಾರವು ಅಧಿಕಾರಕ್ಕೆ ಬರಬೇಕೆಂಬುದು ದೇಶದ ಜನರ ಹಲವು ದಶಕಗಳ ಬಯಕೆಯಾಗಿತ್ತು.ಅದು ದೆಹಲಿಯಲ್ಲಿ ಇಂದು ಸಾಕಾರಗೊಂಡಿದೆ ಎಂದರು.
ಇನ್ನು ಸಾಮಾನ್ಯ ಜನರ ನಾಡಿಮಿಡಿತವನ್ನು ಅರಿತುಕೊಂಡು ಕೇಜ್ರಿವಾಲ್ ಮುನ್ನಡೆಯುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆ, ಆರೋಗ್ಯ, ಸಾರಿಗೆ, ಕ್ರೀಡೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಎಎಪಿ ಸರ್ಕಾರ ಉತ್ತಮ ಆಡಳಿತ ನೀಡಿದೆ ಎಂದು ಹೇಳಿದರು.
“ಕೇಜ್ರಿವಾಲ್ ಸರ್ಕಾರವು ಶಿಕ್ಷಣ, ಆರೋಗ್ಯ, ವಿದ್ಯುತ್, ಸಾರಿಗೆ ಮುಂತಾದ ಅಗತ್ಯ ಸೇವೆಗಳನ್ನು ಒಂದು ಮಿತಿಯವರೆಗೆ ಉಚಿತವಾಗಿ ನೀಡುತ್ತಿದೆ. ಇತರೆ ರಾಜ್ಯಗಳ ಪ್ರಚಾರಕ್ಕೆ ಹೋದಾಗಲೂ ಕೇಜ್ರಿವಾಲ್ ಇದೇ ರೀತಿಯ ಭರವಸೆಗಳನ್ನು ನೀಡುತ್ತಿದ್ದಾರೆ. ಅಗತ್ಯ ಸೇವೆಗಳನ್ನು ಉಚಿತವಾಗಿ ಪಡೆಯುವುದು ತೆರಿಗೆ ಕಟ್ಟುವ ಜನರ ಹಕ್ಕಾಗಿದ್ದು, ಇದನ್ನು ಯಾರೂ ಅವಹೇಳನ ಮಾಡಬಾರದು ಎಂದರು.
ಬೇರೆ ಪಕ್ಷಗಳ ಸರ್ಕಾರಗಳು ಜನರ ಜೇಬಿಗೆ ಕತ್ತರಿ ಹಾಕಿ, ಅವರ ದುಡ್ಡನ್ನು ತಮ್ಮ ಪಕ್ಷ ನಾಯಕರ ಜೇಬಿಗೆ ಇಳಿಸಿಕೊಳ್ಳುತ್ತಿವೆ. ಆದರೆ ಆಮ್ ಆದ್ಮಿ ಪಾರ್ಟಿ ಸರ್ಕಾರವು ಅದನ್ನು ಉಚಿತ ಸೌಲಭ್ಯಗಳ ರೂಪದಲ್ಲಿ ಜನರ ದುಡ್ಡನ್ನು ಜನರ ಜೇಬಿಗೇ ಹಾಕುತ್ತಿದೆ ಎಂದು ಮಾಲವಿಕ ಗುಬ್ಬಿವಾಣಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಮಾಧ್ಯಮ ಉಸ್ತುವಾರಿ ಜಿ.ಆರ್.ವಿದ್ಯಾರಣ್ಯ ಸಂವಿಧಾನದ ಬಗ್ಗೆ ವಿಸ್ತಾರವಾಗಿ ಮಾತನಾಡಿ, “ದೇಶವು ಸಂವಿಧಾನವನ್ನು ಅಳವಡಿಸಿಕೊಂಡ ದಿನದಂದೇ ಸ್ಥಾಪನೆಯಾಗಿರುವ ಆಮ್ ಆದ್ಮಿ ಪಾರ್ಟಿಯು ಸಂವಿಧಾನವನ್ನು ಹೆಚ್ಚು ಗೌರವಿಸುವ ಪಕ್ಷವಾಗಿದೆ. ನಮ್ಮದು ಧರ್ಮನಿರಪೇಕ್ಷ ರಾಷ್ಟ್ರವಾಗಿರುವುದರಿಂದ ಆಡಳಿತದ ವಿಚಾರದಲ್ಲಿ ಜಾತಿ-ಧರ್ಮ ಇವನ್ನು ಸೇರಿಸುವುದು ಸರಿಯಲ್ಲ ಎಂದರು.
ಜಾತಿ ಹಾಗೂ ಧರ್ಮಗಳ ಭೇದವಿಲ್ಲದೇ ಕೇವಲ ಅಭಿವೃದ್ಧಿಯ ಗುರಿ, ಪ್ರಾಮಾಣಿಕತೆ ಹಾಗೂ ಜನಪರ ಕಾಳಜಿಯನ್ನೇ ರಾಜಕಾರಣ ಎಂದುಕೊಂಡಿರುವ ಏಕೈಕ ಪಕ್ಷ ನಮ್ಮದು. ನಮ್ಮ ಕಾರ್ಯಕರ್ತರು ಸಂವಿಧಾನದಲ್ಲಿ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ತಿಳಿದುಕೊಡಿದ್ದಲ್ಲಿ ಜನರಿಗೆ ಹೆಚ್ಚು ಸಮರ್ಪಕವಾಗಿ ಸಹಾಯ ಮಾಡಬಹುದು” ಎಂದು ಹೇಳಿದರು.
ಮೈಸೂರು ಜಿಲ್ಲೆಯ ಎಎಪಿ ಮುಖಂಡರಾದ ಪಾರ್ಥಸಾರಥಿ, ಮೊಹಮ್ಮದ್ ಇಸ್ಮಾಯಿಲ್, ಮಹಾದೇವಿ, ಶಿವಕುಮಾರ್, ನವೀದ್ ಅಬ್ಬಾಸ್, ವೇಣುಗೋಪಾಲ್, ಆರ್.ಪ್ರಸಾದ್, ಪರಮೇಶ್, ಶಶಿಕಲಾ, ಪರ್ವೇಜ್, ಯೂನುಸ್, ದಾನಿಶ್, ತನ್ವೀರ್, ಕಿರಣ್ ಹಾಗೂ ಅನೇಕ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.