- 2,130 ಚಾಲಕರು ಮತ್ತು 2,112 ಕಂಡಕ್ಟರ್‌ಗಳು ಸೇರಿದಂತೆ 92,266 ನೌಕರರ ಪೈಕಿ 18,090 ಶನಿವಾರ ಕರ್ತವ್ಯಕ್ಕೆ ಹಾಜರ್
- ಶನಿವಾರ ಇನ್ನೂ 3,010 ಮುಷ್ಕರ ನಿರತ ನೌಕರರನ್ನು ಅಮಾನತುಗೊಳಿಸಿದೆ ಜತೆಗೆ 270 ದಿನಗೂಲಿ ಕಾರ್ಮಿಕರ ವಜಾ
ಮುಂಬೈ: ಎಂಎಸ್‌ಆರ್‌ಟಿಸಿ ನಿಗಮವನ್ನು ಮಹಾರಾಷ್ಟ್ರ ಸರ್ಕಾರದೊಂದಿಗೆ ವಿಲೀನಗೊಳಿಸಬೇಕು ಎಂದು ಆಗ್ರಹಿಸಿ ನೌಕರರ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 31ನೇ ದಿನವೂ ಮುಂದುವರಿದಿದೆ.
ತಮ್ಮ ಬೇಡಿಕೆ ಈಡೇರುವವರೆಗೂ ಬಸ್‌ಗಳನ್ನು ಡಿಪೋಗಳಿಂದ ಹೊರಗೆ ತೆಗೆಯಬಾರದು ಎಂದು ಹೇಳುತ್ತಿದ್ದರೂ ಕೆಲ ನೌಕರರು ಬಸ್ ಓಡಿಸಲು ಮುಂದಾಗಿದ್ದಾರೆ. ಇದರಿಂದ ಕುಪಿಗೊಂಡಿರುವ ಪ್ರತಿಭಟನಾ ನಿರತ ನೌಕರರ ಪರ ಸಂಘಟನೆಗಳ ಪದಾಧಿಕಾರಿಗಳು ರಸ್ತೆಗಿಳಿದ ಬಸ್‌ಗಳನ್ನು ತಡೆದು ಚಾಲನಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಮೂಲಕ ಮುಷ್ಕರವು ಹಿಂಸಾರೂಪ ಪಡೆದುಕೊಳ್ಳುತ್ತಿದೆ.
ಎಲ್ಲ ನೌಕರರ ಭವಿಷ್ಯಕ್ಕಾಗಿ ಮುಷ್ಕರ ನಡೆಸುತ್ತದ್ದೇವೆ. ಆದರೆ, ಈ ನಡುವೆಯೂ ಬಸ್‌ಗಳನ್ನು ಓಡಿಸುತ್ತಿದ್ದಾರೆ ಎಂದು ಆಕ್ರೋಶಗೊಂಡ ನೌಕರರು ನಾಸಿಕ್, ಧುಲೆ, ಜಲಗಾಂವ್, ಸೋಲಾಪುರ ಮತ್ತು ಇತರ ಜಿಲ್ಲೆಗಳ 13 ಸ್ಥಳಗಳಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಈ ವೇಳೆ ನಾಸಿಕ್‌ನಲ್ಲಿ ಚಾಲಕನ ಕೈಗೆ ಸಣ್ಣ ಗಾಯವಾಗಿದ್ದು, ಕೆಲವು ಕಡೆ ಬಸ್ ಮುಂದಿನ ಮತ್ತು ಹಿಂಬದಿ ಹಾಗೂ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್‌ಗಳ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಂತರ ವೇತನ ಹೆಚ್ಚಳ ಮಾಡಿದರೂ ಮುಷ್ಕರ ಮುಂದುವರಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (MSRTC) ಶನಿವಾರವೂ 3,010 ಮುಷ್ಕರ ನಿರತ ನೌಕರರನ್ನು ಅಮಾನತುಗೊಳಿಸಿದೆ ಜತೆಗೆ 270 ದಿನಗೂಲಿ ಕಾರ್ಮಿಕರ ಸೇವೆಯನ್ನು ವಜಾಗೊಳಿಸಿದೆ. ಈ ನಡುವೆ 18,000 ಕ್ಕೂ ಹೆಚ್ಚು ನೌಕರರು ಕೆಲಸಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ ಇಲ್ಲಿಯವರೆಗೆ, ನಿಗಮವು 6,277 ನೌಕರರನ್ನು ಅಮಾನತುಗೊಳಿಸಿದೆ ಮತ್ತು ಕೆಲಸಕ್ಕೆ ಗೈರುಹಾಜರಾದ 1,496 ದಿನಗೂಲಿ ಕಾರ್ಮಿಕರ ಸೇವೆಗಳನ್ನು ವಜಾಗೊಳಿಸಿದೆ.
ರಾಜ್ಯದ 250 ಬಸ್ ಡಿಪೋಗಳ ಪೈಕಿ 50 ಡಿಪೋಗಳಲ್ಲಿ ಬಸ್ ಕಾರ್ಯಾಚರಣೆ ಪುನರಾರಂಭಿಸಲಾಗಿದೆ ಎಂದು MSRTC ವಕ್ತಾರ ತಿಳಿಸಿದ್ದಾರೆ. ಶನಿವಾರ ಸಂಜೆ 5 ಗಂಟೆಗೆ 728 ಸಾಮಾನ್ಯ ಬಸ್‌ಗಳು ಸೇರಿದಂತೆ 937 ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಾಂಗ್ಲಿ ವಿಭಾಗದಲ್ಲಿ ಹತ್ತು, ರತ್ನಗಿರಿ ಮತ್ತು ರಾಯಗಡ ವಿಭಾಗಗಳಲ್ಲಿ ತಲಾ ಐದು ಬಸ್ ಡಿಪೋಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
2,130 ಚಾಲಕರು ಮತ್ತು 2,112 ಕಂಡಕ್ಟರ್‌ಗಳು ಸೇರಿದಂತೆ 92,266 ನೌಕರರ ಪೈಕಿ 18,090 ಶನಿವಾರ ಕರ್ತವ್ಯಕ್ಕೆ ಮರಳಿದ್ದಾರೆ. ರಾಯಗಡ ಜಿಲ್ಲೆಯ ಮಂಗಾಂವ್‌ನಂತಹ ಕೆಲವು ಡಿಪೋಗಳಲ್ಲಿ ಎಲ್ಲಾ ನೌಕರರು ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ, ಎಂಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಕ್ರಿಯಾ ಸಮಿತಿಯೊಂದಿಗಿನ ಸಭೆಯ ನಂತರ, ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್ ಅವರು ನೌಕರರಿಗೆ ಕರ್ತವ್ಯವನ್ನು ಪುನರಾರಂಭಿಸಲು ಮನವಿ ಮಾಡಿದರು ಮತ್ತು ಅವರು ಕೆಲಸಕ್ಕೆ ಗೈರುಹಾಜರಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದರು.