ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿರುವ ಇಸ್ರೋ ಕಚೇರಿಯನ್ನು ಗುಜಾರಾತ್ ರಾಜ್ಯಕ್ಕೆ ವರ್ಗಾಹಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಎನ್‍ಎಸ್‍ಯುಐ ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಸಂಜಯನಗರದಲ್ಲಿರುವ ಇಸ್ರೋ ಕೇಂದ್ರ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮ ಹಿರಿಯರು ಕಟ್ಟಿ ಬೆಳಸಿದ ಹಲವಾರು ಸಂಸ್ಥೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಿದೆ.
ಬೆಂಗಳೂರಿನ ಹವಮಾನ, ಉತ್ತಮ ಪರಿಸರದ ಕಾರಣದಿಂದ ಇಸ್ರೋ ಸಂಸ್ಥೆ ಸ್ಥಾಪಿಸಲಾಯಿತು. ಅದರೆ ಇಂದು ಗುಜರಾತ್ ರಾಜ್ಯಕ್ಕೆ ಇಸ್ರೋ ಸಂಸ್ಥೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ.
ರಾಜ್ಯದ 25 ಬಿಜೆಪಿ ಲೋಕ ಸಭಾ ಸದಸ್ಯರು, 12 ರಾಜ್ಯ ಸಭಾ ಸದಸ್ಯರು ಪ್ರಧಾನಿ ಅವರ ಬಳಿ ನಿಯೋಗ ತೆರಳಿ ಇಸ್ರೋ ಸಂಸ್ಥೆ ಇಲ್ಲಿಯೇ ಉಳಿಯುವಂತೆ ಮಾಡಬೇಕು.
ನರೇಂದ್ರ ಮೋದಿಯೊಂದಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸಿ ಇಸ್ರೋ ಸಂಸ್ಥೆ ಇಲ್ಲಿ ಉಳಿಯುವಂತೆ ಮನವಿ ಮಾಡಬೇಕು. ಅದಲ್ಲದೆ ವರ್ಗಾವಣೆಯಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಶಾಸಕರಾದ ಕೃಷ್ಣಭೈರೇಗೌಡ, ಎನ್‍ಎಸ್‍ಯುಐ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ಹಾಗೂ ಬೆಂಗಳೂರುನಗರ ಉತ್ತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಜಯಸಿಂಹ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.