ನಂಜನಗೂಡು : ಮೊದಲ ಪತ್ನಿಯನ್ನು ಹತ್ಯೆಮಾಡಿ ಜೈಲು ಸೇರಿದ ಪಾತಕಿಯೊಬ್ಬ ಹೊರಬಂದು ಮತ್ತೆ ಎರಡನೆಯ ಪತ್ನಿ ಗರ್ಭಿಣಿ ಸೇರಿ ಮೂವರನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಈರಯ್ಯ ಎಂಬಾತನೆ ಒಟ್ಟು ನಾಲ್ವರನ್ನು ಕೊಲೆ ಮಾಡಿದ ಆರೋಪಿ. ಇಬ್ಬರನ್ನು ಮದುವೆಯಾಗಿದ್ದ ಈ ಪಾಪಿ ಆ ಇಬ್ಬರೂ ಪತ್ನಿಯರನ್ನು ಕೊಲೆ ಮಾಡಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಈತ ಮೊದಲು ಮದುವೆಯಾಗಿ ಆ ಪತ್ನಿಯ ಜತೆ ಜಗಳ ತೆಗೆದು ಕೊಲೆ ಮಾಡಿದ್ದ. ಈ ಕೃತ್ಯಕ್ಕೆ ಈರಯ್ಯನಿಗೆ ಜೈಲು ಶಿಕ್ಷೆಯಾಗಿ ಬಳಿಕ ಜೈಲಿನಿಂದ ಹೊರಬಂದು ಮಹದೇವಮ್ಮ ಎಂಬುವರನ್ನು ಎರಡನೇ ಮದುವೆಯಾಗಿದ್ದ. ಆಕೆ ಗರ್ಭಿಣಿಯಾಗಿದ್ದಳು.
ಮತ್ತೆ ಆಕೆಯೊಂದಿಗೂ ಜಗಳವಾಡಿ ಆಕೆಯ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ತಡೆಯಲು ಬಂದ ಅಕ್ಕಪಕ್ಕದ ಮನೆಯ ನಾಲ್ವರ ಮೇಲೂ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾನೆ. ಈತನ ಕೃತ್ಯಕ್ಕೆ ಪತ್ನಿ ಮಹದೇವಮ್ಮ, ಎದುರು ಮನೆಯ ನಿಂಗಮ್ಮ(50) ಮತ್ತು ಮಾದಯ್ಯ(60) ಅವರು ಕೊಲೆಯಾಗಿದ್ದಾರೆ.
ಇನ್ನು ದಾಳಿಗೆ ಒಳಗಾಗಿರುವ ನಿಂಗಮ್ಮ ತಂದೆ, ತಾಯಿ ಹಾಗೂ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.