ಬೆಂಗಳೂರು: ಬೆಂಗಳೂರಿನ ರಸ್ತೆಗುಂಡಿಗಳು ಮಾರಣಾಂತಿಕವಾಗಿ ಪರಿಣಮಿಸಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಸ್ತೆ ಗುಂಡಿಗಳ ಬಳಿ ಬ್ಯಾರಿಕೇಡ್ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಬೇಕು. ಗುಂಡಿಗಳ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 10 ದಿನಗಳ ಹಿಂದೆ ನಡೆಸಿದ ಸಭೆಯಲ್ಲಿ ಸೂಚನೆ ನೀಡಿದ್ದರು. ಕನಿಷ್ಠ ಮುಖ್ಯಮಂತ್ರಿಗಳ ಮಾತಿಗೆ ಕಿಮ್ಮತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕಳೆದ 3 ತಿಂಗಳಲ್ಲಿ ರಸ್ತೆಗುಂಡಿಯಿಂದಾಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ತೆರಿಗೆ ಪಾವತಿಸುವ ಜನರಿಗೆ ಸರಿಯಾದ ವ್ಯವಸ್ಥೆ ಮಾಡಬೇಕಾದ್ದು ಸರ್ಕಾರದ ಜವಾಬ್ದಾರಿಯಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಈ ನಿರ್ಲಕ್ಷ್ಯಕ್ಕೆ ಕಾರಣವಾದರೂ ಏನು ಎಂದು ಪ್ರಶ್ನಿಸಿರುವ ಅವರು, ಇದು 40% ಸರ್ಕಾರದ ಕಮಿಷನ್ ದಂಧೆಯ ಪರಿಣಾಮ ಎಂದು ಹೇಳಿದ್ದಾರೆ.
ರಸ್ತೆಗುಂಡಿಗೆ ಬಲಿಯಾದವರ ಕುಟುಂಬಗಳಿಗೆ ನೈತಿಕ ಹೊಣೆ ಹೊತ್ತು ಸರ್ಕಾರ ಪರಿಹಾರ ನೀಡಬೇಕು. ರಸ್ತೆಗಳು ಹಾಳಾಗಿ ಜನರು ಪರದಾಡುವಂತಾಗಿರುವುದಕ್ಕೆ ಕ್ಷಮೆ ಯಾಚಿಸಿ, ಕೂಡಲೇ ರಸ್ತೆಗಳನ್ನು ದುರಸ್ತಿ ಮಾಡಬೇಕು. ಜನರ ಹಿತಾಸಕ್ತಿ ಕಾಪಾಡದ ಆಡಳಿತವೇ ವ್ಯರ್ಥ ಎಂದು ಹೇಳಿದ್ದಾರೆ.