ಶಿರಾ : ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ (ನ.29) ಆರಂಭಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಪಾದಯಾತ್ರೆ ಇಂದು (ಡಿ.4) ಆರನೇ ದಿನಕ್ಕೆ ಕಾಲಿಟ್ಟಿದ್ದು, ಮಹಿಳೆಯರೂ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ನೌಕರರು ಭಾಗವಹಿಸುತ್ತಿದ್ದಾರೆ.
ಶುಕ್ರವಾರ ಮುಂಜಾನೆ ಶಿರಾ ಕೆಎಸ್‌ಆರ್‌ಟಿಸಿ ನೌಕರರೊಬ್ಬರು ಉಪಾಹಾರ ವ್ಯವಸ್ಥೆ ನಾಡಿದ್ದರು. ಅದನ್ನು ಸೇವಿಸಿದ ಬಳಿಕ ಮತ್ತೆ ತಮ್ಮ ಪಾದಯಾತ್ರೆಯನ್ನು ಮುಂದುವರಿಸಿದರು. ಮಲ್ಲೇಹಳ್ಳಿ ಗ್ರಾಮಸ್ಥರು ನೌಕರರ ಸಮಸ್ಯೆ ಆಲಿಸಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು.
ಇನ್ನು ಶುಕ್ರವಾರ ರಾತ್ರಿ ಲಿಂಗನಹಳ್ಳಿಯಲ್ಲಿ ವಾಸ್ತವ್ಯ ಮಾಡಿ ಶನಿವಾರ ಮುಂಜಾನೆ ಮತ್ತೆ ಪಾದಯಾತ್ರೆ ಆರಂಭಿಸಿದ್ದಾರೆ. ಈ ವೇಳೆ ಅನಾರೋಗ್ಯದಿಂದ ಬಳಲುತ್ತಿರುವ ಬಿಎಂಟಿಸಿ ಘಟಕ 35ರ ವಜಾಗೊಂಡ ನೌಕರ ರುದ್ರೇಶ್ ಅವರು ಶಸ್ತ್ರ ಚಿಕಿತ್ಸೆಗೊಳಗಾಗಬೇಕಿತ್ತು. ಆದರೆ ಅದನ್ನು 15ದಿನಗಳವರೆಗೆ ಮುಂದೂಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ಆಗಿ ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಅವರಂತೆ ಉಳಿದ ನೌಕರರು ಪಾದಯಾತ್ರೆ ಬೆಂಬಲಿಸಿದರೆ ಯಶಸ್ಸು ಕಾಣಲಿದೆ. ಇನ್ನು ಇಂದು ರಾತ್ರಿ ತುಮಕೂರಿನ ಸಿದ್ಧಗಂಗಾಮಠದಲ್ಲಿ ವಾಸ್ತವ್ಯ ಮಾಡಿ ಭಾನುವಾರ ಬೆಳಗ್ಗೆ 8ಗಂಟೆಗೆ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಮತ್ತೆ ಪಾದಯಾತ್ರೆ ಮುಂದುವರಿಸಲಿದ್ದಾರೆ.
ಮಾರ್ಗಮಧ್ಯೆ ಪಾದಯಾತ್ರೆ ಬರುತ್ತಿರುವ ನೌಕರರಿಗೆ ಕಾಫಿ, ತಂಪುಪಾನಿಯಗಳು ಮತ್ತು ಎಳೆನೀರಿನ ವ್ಯವಸ್ಥೆಯನ್ನು ಹಲವು ಗ್ರಾಮಗಳ ಗ್ರಾಮಸ್ಥರು ಮಾಡುತ್ತಿದ್ದಾರೆ. ಜತೆಗೆ ತಾವು 1-2ಕಿಮೀ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ನೀಡುತ್ತಿದ್ದಾರೆ.
ಕಳೆದ ಐದು ದಿನಗಳಲ್ಲಿ ಪಾದಯಾತ್ರೆ : ಸೋಮವಾರ (ನ.29) ಬಳ್ಳಾರಿ ಸಾರಿಗೆ ಕೇಂದ್ರ ಬಸ್ ನಿಲ್ದಾಣದಿಂದ ಕೇವಲ ಇಬ್ಬರು ನೌಕರರಿಂದ ಪಾದಯಾತ್ರೆ ಆರಂಭ. ಮಂಗಳವಾರ (ನ.30) ಹಾನಗಲ್‌ಲ್ಲಿ ವಾಸ್ತವ್ಯ. ಮುಂಜಾನೆ 5ಗಂಟೆಗೆ ಹಾನಗಲ್‌ನಿಂದ ಮತ್ತೆ ಪಾದಯಾತ್ರೆ ಆರಂಭ.
ಇದಕ್ಕೂ ಮುನ್ನ ಹಾನಗಲ್‌ನಲ್ಲಿ ರಾತ್ರಿ ಉಳಿದುಕೊಳ್ಳಲು ಮತ್ತು ಊಟದ ವ್ಯವಸ್ಥೆಯನ್ನು ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಮಾಡಿಕೊಟ್ಟಿದ್ದರು.
ಮಂಗಳವಾರ ಚಳ್ಳಕೆರೆ ತಲುಪಿದ ಪಾದಯಾತ್ರೆ ತಮ್ಮ ಸಹೋದ್ಯೋಗಿಯ ಮನೆಯಲ್ಲಿ ವಾಸ್ತವ್ಯ ಮಾಡಿತು. ಮೂರನೇ ದಿನವಾದ ಬುಧವಾರ ಬೆಳಗ್ಗೆ ತಿಂಡಿ ಮುಗಿಸಿ ಚಳ್ಳಕೆರೆಯಿಂದ ಪಾದಯಾತ್ರೆ ಮತ್ತೆ ಮುಂದುವರಿಯಿತು.
ಬುಧವಾರ (ಡಿ.1) ರಾತ್ರಿ ಹಿರಿಯೂರು ತಲುಪಿದ ಪಾದಯಾತ್ರೆಗೆ ಸಾರಿಗೆ ಮಹಿಳಾ ನೌಕರರೊಬ್ಬರು ತಮ್ಮ ಸಹೋದ್ಯೋಗಿಗಳು ಉಳಿದುಕೊಳ್ಳಲು ಲಾಡ್ಜ್‌ನಲ್ಲಿ ವ್ಯವಸ್ಥೆ ಮಾಡುವ ಮೂಲಕ ಬೆಂಬಲ ನೀಡಿದ್ದರು.
ಗುರುವಾರ (ಡಿ.2) ಬೆಳಗ್ಗೆ ಬಿಎಂಟಿಸಿಯ ನೌಕರರೊಬ್ಬರು ಹಿರಿಯೂರಿನಲ್ಲಿರುವ ತಮ್ಮ ಮನೆಯಲ್ಲಿಯೇ ಉಪಾಹಾರ ವ್ಯವಸ್ಥೆ ಮಾಡಿದ್ದರು. ಮತ್ತೆ 6 ಮಂದಿ ವಜಾಗೊಂಡ ನೌಕರರು ಸೇರಿ ಇತರ ನೌಕರರು ಪಾದಯಾತ್ರೆಗೆ ಬಂದು ಸೇರಿಕೊಂಡರು.
5 ನೇ ದಿನವಾದ ಶುಕ್ರವಾರ ದೊಡ್ಡಯ್ಯ, ನಿಂಗಪ್ಪ, ಸೆಲ್ವಂ, ರಾಮು ಮತ್ತು ಮಂಜೇಗೌಡ, ಇಬ್ಬರು ಮಹಿಳಾ ನೌಕರರು ಸೇರಿದಂತೆ 20ಕ್ಕೂ ಹೆಚ್ಚು ನೌಕರರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಪ್ರತಿ ನಿತ್ಯ 30 ಕಿಮೀ ಸಾಗುತ್ತಿದ್ದ ಪಾದಯಾತ್ರೆ ಸದ್ಯ 20 ಕಿಮೀಗೆ ಸೀಮಿತವಾಗಿದೆ. ಕಾರಣ ಬಿಸಿನ ತಾಪ ಹೆಚ್ಚಗುತ್ತಿರುವುದರಿಂದ ಕೆಲ ನೌಕರರ ಪಾದಗಳಲ್ಲಿ ಬೊಬ್ಬೆಬರುತ್ತಿದೆ. ಹೀಗಾಗಿ 20 ಕಿಮೀಗೆ ಸೀಮಿತವಾಗಿದೆ.
ಪಾದಯಾತ್ರೆ ಬರುತ್ತಿರುವ ಮಾರ್ಗ: ಬಳ್ಳಾರಿ ಕೇಂದ್ರ ಬಸ್‌ನಿಲ್ದಾಣದಿಂದ ಆರಂಭವಾದ ಪಾದಯಾತ್ರೆ ಹಾನಗಹಲ್- ಚಳ್ಳಕೆರೆ – ಹಿರಿಯೂರು ಬೈಪಾಸ್ – ತುಮಕೂರು – ಯಶವಂತಪುರ – ಮೇಖ್ರಿ ವೃತ್ತ – ಪ್ಯಾಲೇಸ್‌ಗುಟ್ಟಹಳ್ಳಿ ಮಾರ್ಗವಾಗಿ ಸಾಗುತ್ತಿದೆ.