ಬೆಂಗಳೂರು: ಈ ಸರ್ಕಾರದಲ್ಲಿ ರಾಜ್ಯದ ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಎಲ್ಲರೂ ಭ್ರಷ್ಟರಾಗಿದ್ದಾರೆ ಎಂದು ನೇರ ಆರೋಪ ಮಾಡಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇನ್ನು 15 ದಿನದಲ್ಲಿ ಗುತ್ತಿಗೆದಾರರಿಂದ ಕಮಿಷನ್ ಬೇಡಿಕೆ ಕುರಿತು ಮತ್ತೊಮ್ಮೆ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇವೆ ಎಂದು ಹೇಳಿದ್ದಾರೆ.
ಬುಧವಾರ ನಗರದ ಕುಮಾರ ಪಾರ್ಕ್ನಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ತಮ್ಮ ನೇತೃತ್ವದ ಗುತ್ತಿಗೆದಾರರ ಸಂಘದ ನಿಯೋಗ ಭೇಟಿ ಮಾಡಿದ ಬಳಿಕ ಮಾತನಾಡಿದರು. ಈ ಸರ್ಕಾರ ಮೂರು ವರ್ಷಗಳಿಂದ ಗುತ್ತಿಗೆದಾರರಿಗೆ ಕೊಡಬೇಖಿರುವ 22 ಸಾವಿರ ಕೋಟಿ ರೂ.ಬಾಕಿ ಉಳಿಸಿಕೊಂಡಿದೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ಶೇ.40ರಷ್ಟು ಕಮಿಷನ್ ವಿಚಾರ ಪ್ರಸ್ತಾಪ ಮಾಡುವುದಾಗಿ ಹೇಳಿದ್ದಾರೆ. ಕಮಿಷನ್ ಸಂಗ್ರಹಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಈ ಕುರಿತು ನಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿದರು.
ಭ್ರಷ್ಟಾಚಾರದಲ್ಲಿ ಮಂತ್ರಿ, ಶಾಸಕರು ನಂಬರ್ 1 ಸ್ಥಾನದಲ್ಲಿದ್ದಾರೆ. ಇದಕ್ಕೆ ಸಿಎಂ ಅವರು ಹೊರತಾಗಿಲ್ಲ. ಕೆಲವು ಕಡೆ ಶೇ.100ರಷ್ಟು ಭ್ರಷ್ಟಾಚಾರವಿದೆ. ಒಂದು ನಯಾಪೈಸೆ ಕೆಲಸ ಮಾಡದೇ ಶೇ.100ರಷ್ಟು ಹಣವನ್ನು ತಿಂದಿದ್ದಾರೆ. ಇನ್ನು ಎಲ್ಲ ಶಾಸಕರು ಶೇ.10ರಿಂದ 15ರಷ್ಟು ಕಮಿಷನ್ ಕೇಳುತ್ತಾರೆ. ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದೆ. ಒಬ್ಬರಿಗೆ ಅಂತ ರ್ಯಾಂಕಿಂಗ್ ಕೊಡಲು ಆಗುವುದಿಲ್ಲಎಂದು ಆರೋಪಿಸಿದರು.
ಇನ್ನು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಕಲೆಕ್ಷನ್ ಮಾಡಿಕೊಡಲು ಹೇಳಿದ್ದಾರೆ. ನಮಗೆ ಈಗ ಬಂದಿರುವ ವರದಿ ಪ್ರಕಾರ ಕಮಿಷನ್ ಕೇಳಿದ್ದಾರೆ. ಪರೋಕ್ಷವಾಗಿ ಸಚಿವರಿಂದ ಬೆದರಿಕೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರೇ ಹಣ ಸಂಗ್ರಹ ಮಾಡುತ್ತಿದ್ದಾರೆ. 3 ವರ್ಷದಿಂದ ಬಾಕಿ ಪಾವತಿಯಾಗಿಲ್ಲ. ರಾಜರಾಜೇಶ್ವರಿ ನಗರದಲ್ಲಿ 10 ಸಾವಿರ ಕೋಟಿ ರೂ.ಗಳಷ್ಟು ಕೆಲಸ ಮಾಡಿಸಿದ್ದಾರೆ. ಆದರೆ, ಏನು ಅಭಿವೃದ್ಧಿ ಆಗಿದೆ ಎಂದು ಕೆಂಪಣ್ಣ ಕೇಳಿದರು.
ಇತ್ತ ಕಮಿಷನ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ನ್ಯಾಯಾಂಗ ತನಿಖೆ ಮಾಡಿದರೆ, ಸೂಕ್ತ ದಾಖಲೆಗಳನ್ನು ನಾವು ಒದಗಿಸುತ್ತೇನೆ. ಇಲ್ಲವಾದರೆ ನಮ್ಮ ಆರೋಪ ಸುಳ್ಳೆಂದು ಸಾಬೀತು ಮಾಡಿದರೆ ಏನು ಬೇಕಾದರೂ ಶಿಕ್ಷೆ ಕೊಡಿ, ಅನುಭವಿಸಲು ನಾವು ಸಿದ್ಧ ಎಂದು ಸಿಎಂಗೆ ಸವಾಲ್ ಎಸೆದರು.
ಕಮಿಷನ್ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಅಧಿಕಾರಿಗಳು ಸಿಎಂ ಮಾತನ್ನು ಕೇಳದ ಸ್ಥಿತಿಯಿದೆ. ಟೆಂಡರ್ ಕರೆಯುವ ಪ್ರಕ್ರಿಯೆ ಬದಲಾಯಿಸಲು ಸಿಎಂ ಹೇಳಿದ್ದರು. ಆದರೆ, ಅಧಿಕಾರಿಗಳು ಸಿಎಂ ಮಾತೇ ಕೇಳುತ್ತಿಲ್ಲ ಎಂದು ಆರೋಪಿಸಿದರು.