ಬೆಂಗಳೂರು: ಪ್ರಭಾವಿಗಳಿಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ನಿವೇಶನಗಳನ್ನು ಹಂಚಿಕೆ ಮಾಡಿರುವ ಸರ್ಕಾರದ ನೀತಿಗೆ ಸರ್ವೋಚ್ಚ ನ್ಯಾಯಾಲಯ ಛೀಮಾರಿ ಹಾಕಿದೆ. ಈ ಕೂಡಲೇ ಈ ಬಿಡಿಎ ಆಯುಕ್ತರನ್ನು ವರ್ಗಾವಣೆಗೊಳಿಸಬೇಕೆಂದು ಮೌಖಿಕ ಆದೇಶ ನೀಡಿದೆ. ವಾಮ ಮಾರ್ಗದಲ್ಲಿ ನಿವೇಶನ ಪಡೆದ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಲೋಕಾಯುಕ್ತರಿಗೆ ಇಂದು ಆಮ್ ಆದ್ಮಿ ಪಕ್ಷದಿಂದ ದೂರು ದಾಖಲಿಸಲಾಗಿದೆ.
ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗಿದ್ದ ಜಿ ಕೆಟಗರಿ ಸೈಟು ಹಂಚಿಕೆಯನ್ನು ಸಂಪೂರ್ಣವಾಗಿ ನಿಷೇಧಗೊಳಿಸಿದ್ದರೂ ಸಹ ರಾಜ್ಯ ಸರ್ಕಾರವು ಬದಲಿ ನಿವೇಶನ ಹಂಚಿಕೆ ಎಂಬ ವಾಮ ಮಾರ್ಗವನ್ನು ಹುಡುಕಿಕೊಂಡು ಗೃಹಸಚಿವ ಅರಗ ಜ್ಞಾನೇಂದ್ರ ಹಾಗೂ ಇನ್ನಿತರ ಪ್ರಭಾವಿಗಳಿಗೆ ಕೋಟ್ಯಂತರ ರೂಪಾಯಿ ನಿವೇಶನಗಳನ್ನು ಹಂಚಿಕೆ ಮಾಡಿರುವುದಕ್ಕೆ ಇಂದು ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 4ವರ್ಷಗಳಿಂದ ಅತಿವೃಷ್ಟಿ ಹಾವಳಿಯಿಂದ ರಾಜ್ಯದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿದ್ದರೂ ಸಹ ಅವರುಗಳಿಗೆ ಸೂಕ್ತ ಮನೆಗಳನ್ನು ಕಟ್ಟಿಕೊಡಲು ವಿಫಲರಾಗಿರುವ ಬಿಜೆಪಿ ಸರ್ಕಾರ ಈಗ ತನ್ನ ಮಂತ್ರಿ ಹಾಗೂ ಪ್ರಭಾವಿಗಳಿಗೆ ಈ ರೀತಿಯ ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ ನಿವೇಶನಗಳನ್ನು ಹಂಚಿಕೆ ಮಾಡುವ ಪರಿ 40 %ಕಮಿಷನ್ ಬಿಜೆಪಿ ಸರ್ಕಾರದ ಮತ್ತೊಂದು ರೂಪವಾಗಿದೆ ಎಂದು ದಾಸರಿ ಛೀಮಾರಿ ಹಾಕಿದರು.
ಸುಪ್ರೀಂಕೋರ್ಟ್ 2021 ರ ಅಕ್ಟೋಬರ್ 29 ರಂದು ಹೊರಡಿಸಿದ ಆದೇಶಕ್ಕೆ ವ್ಯತಿರಿಕ್ತವಾಗಿ ಈ ರೀತಿಯ ಕೋಟ್ಯಂತರ ರೂಪಾಯಿ ಮೌಲ್ಯದ ಆರ್‌ಎಂವಿ ಬಡಾವಣೆ ಯಂತಹ ಪ್ರತಿಷ್ಠಿತ ಜಾಗದಲ್ಲಿ ಮಂತ್ರಿ ಮಹೋದಯರುಗಳಿಗೆ ಸೈಟು ಹಂಚಿಕೆಯ ಅವ್ಯವಹಾರಗಳಲ್ಲಿ ಮುಳುಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದರು.
ಇನ್ನು ದೇಶದ ಅತ್ಯುನ್ನತ್ತ ನ್ಯಾಯಾಲಯಗಳ ಆದೇಶಗಳಿಗೂ ಸಹ ಕಿಂಚಿತ್ತೂ ಕಿಮ್ಮತ್ತು ಈ ಬಿಜೆಪಿ ಸರ್ಕಾರ ನೀಡುತ್ತಿಲ್ಲ ಎಂದು ಮೋಹನ್ ದಾಸರಿ ವಿಷಾದ ವ್ಯಕ್ತಪಡಿಸಿದರು.
ಉಂಡೂ ಹೋದ ಕೊಂಡೂ ಹೋದ ಎಂಬಂತೆ ರಾಜ್ಯದಲ್ಲಿ ಸಂಪೂರ್ಣ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಗೆಡವಿದ ಗೃಹ ಸಚಿವ ಅರಗ ಜ್ಞಾನೇಂದ್ರ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಈ ಪ್ರಕರಣದಿಂದ ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಈ ಕೂಡಲೇ ಅರಗ ಜ್ಞಾನೇಂದ್ರ ರನ್ನು ಸಂಪುಟದಿಂದ ವಜಾಗೊಳಿಸಬೇಕು ಅಥವಾ ಮರ್ಯಾದೆಯಿಂದ ತಾವೇ ರಾಜೀನಾಮೆ ನೀಡಬೇಕೆಂದು ರಾಜ್ಯ ವಕ್ತಾರ ಹಾಗೂ ಹಿರಿಯ ಮಾಜಿ ಕೆಎಎಸ್ ಅಧಿಕಾರಿ ಕೆ. ಮಥಾಯಿ ಒತ್ತಾಯಿಸಿದರು.
ಆಮ್ ಆದ್ಮಿ ಪಕ್ಷವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತೀವ್ರ ಹೋರಾಟಕ್ಕೆ ಇಳಿಯಲಿದೆ ಎಂದು ಸರಕಾರವನ್ನು ಮಥಾಯಿ ಎಚ್ಚರಿಸಿದರು.