KSRTC: ಸೆ.1ರಂದು ವಜಾಗೊಂಡ ಸಾರಿಗೆ ನೌಕರರ ಚಳವಳಿ – ಹೋರಾಟಕ್ಕೆ ಸಜ್ಜಾದ ಅಮಾಯಕರು
ಬೆಂಗಳೂರು: ಕಳೆದ 2021 ಏಪ್ರಿಲ್ 7ರಿಂದ 21ರವರೆಗೆ ನಡೆದ ಸಾರಿಗೆ ನೌಕರರ ಮುಷ್ಕರದ ವೇಳೆ ಸಾರಿಗೆ ನಿಗಮಗಳ ಡಿಪೋ ವ್ಯವಸ್ಥಾಪಕರು ಅನುಸರಿಸಿದ ಕಾನೂನು ಬಾಹಿರ ನೀತಿಗೆ ಸಾಥ್ ನೀಡಿದ ವಿಭಾಗೀಯ ನಿಯಂತ್ರಣಾಧಿಕಾರಿಗಳ ನಡೆಯಿಂದ ವಜಾಗೊಂಡಿರುವ ನೂರಾರು ನೌಕರರು ಸೆ.1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಚಳವಳಿ ಹಮ್ಮಿಕೊಂಡಿದ್ದಾರೆ.
ಈ ಬಗ್ಗೆ ವಜಾಗೊಂಡ ನೌಕರ ಜಗನ್ನಾಥ್ ಎಂಬುವರು ವಿಡಿಯೋ ಮಾಡಿ ಎಲ್ಲ ವಜಾಗೊಂಡ ನೌಕರರಿಗೆ ಮಾಹಿತಿ ನೀಡಿದ್ದು, ನಮ್ಮನ್ನು ಬಲಿಪಶು ಮಾಡಿರುವ ಅಧಿಕಾರಿಗಳ ನಡೆಯನ್ನು ಖಂಡಿಸಿ ಮತ್ತು ಸರ್ಕಾರಕ್ಕೆ ಸತ್ಯ ತಿಳಿಸಬೇಕಿರುವುದರಿಂದ ನಾವು ಬರುವ ಸೆ.1ರಂದು ಚಳವಳಿ ನಡೆಸೋಣ ಎಂದು ಮನವಿ ಮಾಡಿದ್ದಾರೆ.
ಇನ್ನು ಡಿಎಂಗಳು ನಡೆದುಕೊಂಡ ಕೀಳು ಮನೋಭಾವದ ವಿರುದ್ಧ ನಾವು ಸರ್ಕಾರದ ಕಣ್ಣು ತೆರೆಸಲೇಬೇಕು ಮತ್ತು ಅವರ ತಾಳಕ್ಕೆ ತಕ್ಕಂತೆ ಕುಣಿದ ವಿಭಾಗ ಮಟ್ಟದ ಅಧಿಕಾರಿಗಳ ನಡೆಯನ್ನು ಖಂಡಿಸಬೇಕು ಎಂದು ನೌಕರರು ಒಗ್ಗಟ್ಟಾಗಲು ಸೆ.1ರಂದು ಚಳವಳಿಗೆ ಸಜ್ಜಾಗುತ್ತಿದ್ದಾರೆ.
ಇನ್ನು ನಮಗೆ ಯಾವುದೇ ಸಂಘಟನೆಗಳ ಬೆಂಬಲ ನೀಡಿಲ್ಲ ಎಂದು ಅಸಮಾಧಾನವನ್ನು ಜಗನ್ನಾಥ್ ವ್ಯಕ್ತಪಡಿಸಿದ್ದಾರೆ.
ಅದಕ್ಕೆ ಸಿಐಟಿಯು ಫೆಡರೆಷನ್‌ನ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, CITU ಸಂಘಟನೆ ಸರ್ಕಾರ ಸೇವೆಯಿಂದ ವಜಾ ಮಾಡಿಸಿದ ಕಾರ್ಮಿಕರನ್ನು ಪುನರ್ ನೇಮಕ ಮಾಡುವಂತೆ ಹಲವು ರೀತಿಯ ಚಳವಳಿಯನ್ನು ನಡೆಸಿದೆ.
ಸರ್ಕಾರವನ್ನು ಮಣಿಸುವಷ್ಷು ಒತ್ತಡ ಹಾಕುವ ಪ್ರಯತ್ನದಲ್ಲಿ ಇದ್ದಾಗ ವಜಾ ಆದ ಕಾರ್ಮಿಕರು ಚಳವಳಿಗೆ ಭಾಗವಹಿಸದಂತೆ ಕೂಟ ಮತ್ತು ಅದರಿಂದ ಬೇರೆ ಹೋದ ಗುಂಪಿನವರು ಹಲವು ರೀತಿಯಲ್ಲಿ ಅಡ್ಡಿಪಡಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೂ ಮಾತನಾಡುವಾಗ ಯಾರೂ ಏನು ಮಾಡುತ್ತಿಲ್ಲ ಅಂತ ಹೇಳೋದು ಎಷ್ಟು ಸರಿ. ಈಗಲೂ ಜಂಟಿ ಸಮಿತಿ ಮಾಡಿ ಸೇವೆಯಿಂದ ವಜಾ ಮಾಡಿರುವ ನೌಕರರನ್ನು ಪುನರ್ ನೇಮಕ ಮಾಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಬೇಡಿಕೆ ಪತ್ರ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ತಾವು ಕೂಡ ಈಗ ಚಳವಳಿಗೆ ಹೊರಟಿದ್ದೀರಿ. ನಮ್ಮ ಸಂಪೂರ್ಣ ಬೆಂಬಲವಿದೆ. ನೀವು ಯಾವ ರೀತಿಯ ಸಹಕಾರ ಕೇಳಿದರು ನೀಡುತ್ತೇವೆ. ಶುಭವಾಗಲಿ ನೊಂದ ಕುಟುಂಬಗಳಿಗೆ ಕೂಡಲೇ ಸರ್ಕಾರದಿಂದ ನ್ಯಾಯ ದೊರಕಲಿ ಎಂದು ತಿಳಿಸಿದ್ದಾರೆ.